ಅಕ್ಟೋಬರ್, 17 ರಂದು ತಲಕಾವೇರಿಯಲ್ಲಿ ಜರುಗುವ ಪವಿತ್ರ ತೀರ್ಥೋದ್ಭವ ಸಂಬಂಧ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಸೂಚಿಸಿದ್ದಾರೆ.
ಭಾಗಮಂಡಲ ‘ಶ್ರೀ ಭಗಂಡೇಶ್ವರ ದೇವಾಲಯದ ಹಳೆ ಮುಡಿಶೆಡ್ ಕಟ್ಟಡದ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪವಿತ್ರ ತೀರ್ಥೋದ್ಭವ ಸಂಬಂಧ ತಲಕಾವೇರಿಯಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿ ಕಿರಿಕಿರಿ ಉಂಟಾಗದಂತೆ ಅಧಿಕಾರಿಗಳು ಗಮನಹರಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈ ಬಾರಿ ಅಕ್ಟೋಬರ್, 17 ರಂದು ಬೆಳಗ್ಗೆ 7.40 ಗಂಟೆಗೆ ಪವಿತ್ರ ತೀರ್ಥೋದ್ಭವ ಸಂಭವಿಸುವುದರಿಂದ ರಾತ್ರಿ ವೇಳೆಯಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದ್ದು, ಆದ್ದರಿಂದ ಅಗತ್ಯ ಕ್ರಮವಹಿಸುವಂತೆ ಸಚಿವರು ಸೂಚಿಸಿದರು.ಮಳೆ ಕಡಿಮೆಯಾಗಿದ್ದು, ಕೂಡಲೇ ರಸ್ತೆ ನಿರ್ವಹಣೆ ಕೈಗೊಳ್ಳಬೇಕು. ರಸ್ತೆ ಬದಿ ಕಾಡನನ್ನು ಕಡಿಬೇಕು. ಗಿಡ ಗಂಟೆ ಸಂಬಂಧ ಅರಣ್ಯ ಅಧಿಕಾರಿಗಳು ತಗಾದೆ ತೆಗೆಯಬಾರದು ಎಂದು ನಿರ್ದೇಶನ ನೀಡಿದರು.
ಪೊಲೀಸ್ ಇಲಾಖೆ ಅಧಿಕಾರಿಗಳು ಪವಿತ್ರ ತೀರ್ಥೋದ್ಭವ ಸಂಬಂಧ ಅಗತ್ಯ ಬಂದೋಬಸ್ತ್ ಮಾಡಬೇಕು ಎಂದು ಎನ್.ಎಸ್.ಭೋಸರಾಜು ಅವರು ನಿರ್ದೇಶನ ನೀಡಿದರು.ಸಾರಿಗೆ ಇಲಾಖೆ ಅಧಿಕಾರಿಗಳು ಅಗತ್ಯ ಬಸ್ ಸೌಲಭ್ಯ ಒದಗಿಸುವುದು, ಕಾವೇರಿ ನೀರಾವರಿ ನಿಗಮ, ಸೆಸ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಹಂತದಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸುವಂತೆ ಸೂಚಿಸಿದರು.
ನಾಡಿನ ಜೀವನದಿ ತಲಕಾವೇರಿಯ ಪವಿತ್ರ ತೀರ್ಥೋದ್ಭವ ಒಂದು ವಿಶಿಷ್ಟವಾಗಿದ್ದು, ಪವಿತ್ರ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಭಕ್ತಾಧಿಗಳಿಗೆ ಅಗತ್ಯ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.
ಮಡಿಕೇರಿ-ಭಾಗಮಂಡಲ, ಕರಿಕೆ-ಭಾಗಮಂಡಲ, ವಿರಾಜಪೇಟೆ-ಭಾಗಮಂಡಲ ರಸ್ತೆಗುಂಡಿ ಮುಚ್ಚಬೇಕು. ರಸ್ತೆ ನಿರ್ವಹಣೆ ಮಾಡಬೇಕು. ಹಾಗೆಯೇ ಭಾಗಮಂಡಲ-ತಲಕಾವೇರಿ ರಸ್ತೆ ಸರಿಪಡಿಸುವಂತೆ ನಿರ್ದೇಶನ ನೀಡಿದರು.
ತಲಕಾವೇರಿ ತೀರ್ಥೋದ್ಭವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.