ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಅತಿಯಾದ ಮದ್ಯಪಾನವೂ ಇದಕ್ಕೆ ಹೊರತಲ್ಲ ಎಂದು ನಿಮಗೆ ಬಿಡಿಸಿ ಹೇಳಬೇಕೇ? ಅದೇ ಮದ್ಯಪಾನವನ್ನು ಮಿತವಾಗಿ ಮಾಡುತ್ತಾ ಬಂದಲ್ಲಿ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂದು 48 ಲಕ್ಷ ಮಂದಿಯ ಮೇಲೆ ನಡೆಸಿದ ಅಧ್ಯಯನದ ವರದಿಯೊಂದು ತಿಳಿಸಿದೆ.
ಕೆನಡಾದ ಪೋರ್ಟ್ಸ್‌ಮೌತ್ ಹಾಗೂ ಬ್ರಿಟನ್‌ನ ವಿಕ್ಟೋರಿಯಾ ವಿವಿಗಳ ಸಂಶೋಧಕರು ಈ ಸಂಬಂಧ ನಡೆಸಿದ ಅಧ್ಯಯನವೊಂದರಲ್ಲಿ, 1980ರಿಂದ 2021ರವರೆಗೂ ಪ್ರಕಟಗೊಂಡ 107 ಅಧ್ಯಯನಗಳ ವರದಿಯನ್ನು ವಿಶ್ಲೇಷಿಸಲಾಗಿದೆ.
ಮಿತವಾಗಿ ಮದ್ಯಪಾನ ಮಾಡುವ ಮಂದಿಗೂ, ಮದ್ಯಪಾನ ಮಾಡದೇ ಇರುವ ಮಂದಿಗೂ ಸಾವಿನ ಸರಾಸರಿ ವಯಸ್ಸಿನಲ್ಲಿ ಯಾವುದೇ ಅಂತರವಿಲ್ಲ ಎಂದು ತಿಳಿದು ಬಂದಿರುವ ಈ ಅಧ್ಯಯನದಲ್ಲಿ, ಮಿತಿ ಮೀರಿ ಮದ್ಯಪಾನ ಮಾಡುವ ಮಹಿಳೆಯರಲ್ಲಿ ಸಾವಿನ ಸರಾಸರಿ ವಯಸ್ಸು 20%ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರತಿನಿತ್ಯ 25 ಗ್ರಾಂಗಿಂತ ಹೆಚ್ಚಿನ ಮದ್ಯ ಸೇವನೆಯಿಂದ ಸಾವಿನ ಸಾಧ್ಯತೆಗಳಲ್ಲಿ ಏರಿಕೆ ಕಂಡು ಬರುತ್ತದೆ ಎಂದು ತಿಳಿಸುವ ಈ ಅಧ್ಯಯನವು ಪುರುಷರಿಗಿಂತ ಮಹಿಳೆಯರಲ್ಲಿ ಮದ್ಯಪಾನ ಸಂಬಂಧಿ ದುಷ್ಪರಿಣಾಮಗಳು ವಿಪರೀತ ಎಂದು ತಿಳಿಸಿವೆ.