ಕಾಕ್ಸ್ ಬಜಾರ್: ಬಾಂಗ್ಲಾದೇಶದ ದಕ್ಷಿಣ ಕರಾವಳಿ ಜಿಲ್ಲೆ ಕಾಕ್ಸ್ ಬಜಾರ್ ನಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 1,000 ಕ್ಕೂ ಹೆಚ್ಚು ಆಶ್ರಯ ತಾಣಗಳು ಸುಟ್ಟುಹೋಗಿವೆ. ಸಾವಿರಾರು ಜನ ಮತ್ತೆ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಭಾನುವಾರ ತಿಳಿಸಿದೆ.
ಉಖಿಯ ಕುಟುಪಲೋಂಗ್ ಕ್ಯಾಂಪ್‌ನಲ್ಲಿ ಶನಿವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿತು. ಭಾರಿ ಗಾಳಿಯಿಂದ ವೇಗವಾಗಿ ಹರಡಿತು ಎಂದು ಉಖಿಯಾ ಅಗ್ನಿಶಾಮಕ ಠಾಣೆಯ ಮುಖ್ಯಸ್ಥ ಶಫೀಕುಲ್ ಇಸ್ಲಾಂ ತಿಳಿಸಿದ್ದಾರೆ.
ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಭಾರಿ ಪ್ರಮಾಣದಲ್ಲಿ ವ್ಯಾಪಿಸಿ ಶಿಬಿರದಲ್ಲಿ ಸುಮಾರು 1,040 ಆಶ್ರಯಗಳನ್ನು ನಾಶಪಡಿಸಿದೆ. ನಾವು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದೇವೆ. ಎಂದು ಹೇಳಿದ್ದಾರೆ.
ಭಾನುವಾರ ಮುಂಜಾನೆ ಬೆಂಕಿ ಹರಡಲು ಆರಂಭಿಸಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ನಿರಾಶ್ರಿತರು ತಮ್ಮ ಸಾಮಾನುಗಳೊಂದಿಗೆ ಹತ್ತಿರದ ಬಯಲು ಪ್ರದೇಶಕ್ಕೆ ಓಡಿದ್ದಾರೆ.
ನಾವು ಚಳಿಯಿಂದ ತೀವ್ರವಾಗಿ ಬಳಲುತ್ತಿದ್ದೇವೆ, ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಪ್ರಸ್ತುತ, ಪ್ರಾಣಾಪಾಯದಿಂದ ಪಾರಾದ ನಂತರ ನನ್ನ ಮೊಮ್ಮಕ್ಕಳೊಂದಿಗೆ ಹೊಳೆ ಬಳಿ ಕುಳಿತಿದ್ದೇವೆ. ಬೆಂಕಿಯಿಂದ ನಮ್ಮ ಮನೆಗಳು ನಾಶವಾಗಿವೆ ಎಂದು 65 ವರ್ಷದ ಜುಹುರಾ ಬೇಗಂ ಹೇಳಿದ್ದಾರೆ.
ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ UNHCR, ಹಾನಿಯ ಪ್ರಮಾಣವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಹೇಳಿದೆ.