ಹೈದರಾಬಾದ್: ರೈತ ನಿಜಾಮಾಬಾದ್ ಅರ್ಮೂರ್ನ ಮುತ್ಯಾಲ ಮನೋಹರ್ ರೆಡ್ಡಿ ಎಂಬುವವರು 12 ವರ್ಷ ಚಪ್ಪಲಿ ಧರಿಸದೇ ಸತ್ಯಾಗ್ರಹ ಮಾಡಿ ಸುದ್ದಿಯಾಗಿದ್ದಾರೆ.
ಹೌದು. ಸಾವಿರಾರು ಅರಿಶಿನ ಬೆಳೆಗಾರರ ಅನುಕೂಲಕ್ಕಾಗಿ ಅರಿಶಿನ ಮಂಡಳಿಯನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಮನವರಿಕೆ ಮಾಡುವ ಅವರ ಪ್ರಯತ್ನಗಳು ವಿಫಲವಾದಾಗ, ‘ಸತ್ಯಾಗ್ರಹ’ ವನ್ನು ಆರಂಭಿಸಿದ್ದರು.
ನವೆಂಬರ್ 4, 2011 ರಂದು, ಅವರ ಕುಟುಂಬ, ಸಂಬಂಧಿಕರು, ಸ್ನೇಹಿತರು ಮತ್ತು ಹಿತೈಷಿಗಳ ಪ್ರತಿರೋಧದ ಹೊರತಾಗಿಯೂ, ಅವರು ಮತ್ತೆ ಎಂದಿಗೂ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಘೋಷಿಸಿದರು. ಸರ್ಕಾರವು ಅರಿಶಿನ ರೈತರ ಸಮಸ್ಯೆಗಳನ್ನು ಅರಿತುಕೊಂಡು ಅರಿಶಿನ ಮಂಡಳಿಯನ್ನು ಸ್ಥಾಪಿಸಿದಾಗ ಮಾತ್ರ ಚಪ್ಪಲಿ ಧರಿಸುತ್ತೇನೆ ಎಂದು ಶಪಥ ಮಾಡಿದ್ದರು.
71 ವರ್ಷದ ಮುತ್ಯಾಲ ಮನೋಹರ್ ರೆಡ್ಡಿ ಈಗ ಪಾದರಕ್ಷೆಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ. ಅಕ್ಟೋಬರ್ 1 ರಂದು ಮೆಹಬೂಬ್ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ ನಂತರ, ಮನೋಹರ್ ರೆಡ್ಡಿ ಮೊದಲ ಬಾರಿಗೆ ಚಪ್ಪಲಿ ಧರಿಸಿದ್ದಾರೆ.ನಿಜಾಮಾಬಾದ್ ಮಾರುಕಟ್ಟೆ ಪ್ರಾಂಗಣದಲ್ಲಿ ಅರಿಶಿನ ಬೆಳೆಗಾರರು ಮತ್ತು ಬಿಜೆಪಿ ಮುಖಂಡರು ಅವರನ್ನು ಸನ್ಮಾನಿಸಿದ್ದಾರೆ. ಅವರು ಅವರಿಗೆ ಹೊಸ ಜೋಡಿ ಚಪ್ಪಲಿಯನ್ನು ಖರೀದಿಸಿ ಧರಿಸುವಂತೆ ಹೇಳಿದರು.