
ಭಾನುವಾರದಂದು ಆಸ್ಟ್ರೇಲಿಯಾದ ಮೆಲ್ಬೋರ್ನಲ್ಲಿ ನಡೆದ ಭಾರತ – ಪಾಕಿಸ್ತಾನ ನಡುವಿನ ಹಣಾಹಣಿ ಅತ್ಯಂತ ರೋಚಕತೆಯಿಂದ ಕೂಡಿತ್ತು. ಅದರಲ್ಲೂ ಕೊನೆಯ ಮೂರು ಓವರ್ ಗಳು ಎಲ್ಲರ ಎದೆ ಬಡಿತವನ್ನು ಹೆಚ್ಚಿಸಿದ್ದು, ಅಂತಿಮವಾಗಿ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿದಿದೆ.
ವಿರಾಟ್ ಕೊಹ್ಲಿ ತಾವು ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಕೇವಲ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ಭಾರತಕ್ಕೆ ಗೆಲುವು ಗಳಿಸಿಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಅವರ ಈ ಸಾಧನೆಗೆ ದೇಶದಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದರ ಮಧ್ಯೆ ಈ ರೋಚಕ ಪಂದ್ಯವನ್ನು ಚಿತ್ರಮಂದಿರದ ದೊಡ್ಡ ಪರದೆ ಮೇಲೆ ವೀಕ್ಷಿಸುತ್ತಿದ್ದ ಕ್ರಿಕೆಟ್ ಪ್ರೇಮಿಯೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪಂದ್ಯ ಅಂತಿಮ ಘಟ್ಟ ತಲುಪಿದಾಗ 34 ವರ್ಷದ ಬಿಟು ಗೋಗಾಯಿ ಎಂಬವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದು, ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದ ಎಂದು ಹೇಳಲಾಗಿದೆ. ಆದರೆ ಮೃತನ ಪೋಷಕರು ಆತನಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆಗಳು ಇರಲಿಲ್ಲ ಎಂದು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.