ಖ್ಯಾತ ಬಾಲಿವುಡ್ ಹಿನ್ನಲೆ ಗಾಯಕಿ ಅಲ್ಕಾ ಯಾಗ್ನಿಕ್ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ. ಹಠಾತ್ ವೈರಲ್ ಅಟ್ಯಾಕ್‌ನಿಂದ ಸಂಭವಿಸಿದ ‘ಸಂವೇದನಾ ನರಗಳ ಶ್ರವಣ ನಷ್ಟ’ ಎಂಬ ಸಮಸ್ಯೆ ಇದು. ತಮ್ಮ ಅನಾರೋಗ್ಯದ ಕುರಿತಂತೆ ಖುದ್ದು ಜಾಲತಾಣದಲ್ಲಿ ಬಹಿರಂಗಪಡಿಸಿರೋ ಗಾಯಕಿ, ಅಭಿಮಾನಿಗಳು ಮತ್ತು ಹಿತೈಷಿಗಳ ಹಾರೈಕೆ ಕೋರಿದ್ದಾರೆ.
ಸಂವೇದನಾಶೀಲ ಶ್ರವಣ ನಷ್ಟದಲ್ಲಿ (SNHL) ಒಳಗಿನ ಕಿವಿ ಅಥವಾ ಶ್ರವಣೇಂದ್ರಿಯ ನರಕ್ಕೆ ಹಾನಿಯಾಗುತ್ತದೆ. ಇದು ಹೊರಗಿನ ಕಿವಿಯಲ್ಲಿನ ಸಮಸ್ಯೆಗಳಿಗಿಂತ ಭಿನ್ನವಾಗಿದೆ. ಇದು ಕಿವಿಯೊಳಗೆ ಕೊಳಕು ಶೇಖರಣೆ ಅಥವಾ ಕಿವಿ ತಮಟೆಗೆ ಗಾಯವಾಗುವುದರಿಂದ ಉಂಟಾಗುತ್ತದೆ.
ಸಂವೇದನಾಶೀಲ ಶ್ರವಣ ನಷ್ಟಕ್ಕೆ ಕಾರಣಗಳು
ಹಠಾತ್ ಗಟ್ಟಿಯಾದ ಶಬ್ಧ: ಸ್ಫೋಟಗಳಂತಹ ದೊಡ್ಡ ಶಬ್ದಗಳಿಗೆ ಒಡ್ಡಿಕೊಳ್ಳುವುದು ಅಥವಾ ನಿರಂತರವಾಗಿ ಜೋರಾದ ಸಂಗೀತ ಕೇಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ.
ವಯಸ್ಸು: ವಯಸ್ಸಾದಂತೆ ಕೇಳುವ ಸಾಮರ್ಥ್ಯವು ದುರ್ಬಲಗೊಳ್ಳಬಹುದು, ಇದನ್ನು ಪ್ರೆಸ್ಬಿಕ್ಯೂಸಿಸ್ ಎಂದು ಕೂಡ ಕರೆಯಲಾಗುತ್ತದೆ.
ಆನುವಂಶಿಕ ಕಾರಣ: ಕೆಲವರಿಗೆ ಹುಟ್ಟಿನಿಂದಲೇ ಶ್ರವಣ ದೋಷದ ಸಮಸ್ಯೆ ಇರಬಹುದು.
ಗಾಯ: ತಲೆಗೆ ಗಾಯವಾದಲ್ಲಿ ಅದು ಕೂಡ ಕಿವಿಗಳಿಗೆ ಹಾನಿ ಮಾಡುತ್ತದೆ. ಕಿವಿ ತಮಟೆ ಅಥವಾ ಶ್ರವಣೇಂದ್ರಿಯ ನರಕ್ಕೆ ಹಾನಿಯಾದಲ್ಲಿ ಕಿವುಡುತನ ಉಂಟಾಗಬಹುದು.
ಅನಾರೋಗ್ಯ: ಮೆನಿಯರ್ಸ್ ಕಾಯಿಲೆ ಅಥವಾ ಕಿವಿ ಸೋಂಕುಗಳಂತಹ ಕೆಲವು ಕಾಯಿಲೆಗಳು ಸಹ ಈ ಸಮಸ್ಯೆಯನ್ನು ಉಂಟುಮಾಡಬಹುದು.
ಸಂವೇದನಾಶೀಲ ಶ್ರವಣ ನಷ್ಟಕ್ಕೆ ಚಿಕಿತ್ಸೆ
ಸದ್ಯ ಸಂವೇದನಾಶೀಲ ಶ್ರವಣ ನಷ್ಟಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ ಲಭ್ಯವಿಲ್ಲ. ಶ್ರವಣ ಸಾಧನಗಳು ಮತ್ತು ಕಾಕ್ಲಿಯರ್ ಇಂಪ್ಲಾಂಟ್‌ಗಳ ಮೂಲಕ ಕೊಂಚ ಸುಧಾರಣೆ ಕಾಣಬಹುದು.
ಬಾಹ್ಯ ಪರಿಸರದಿಂದ ಧ್ವನಿಯನ್ನು ವರ್ಧಿಸುವ ಮೂಲಕ ಶ್ರವಣ ಸಾಧನಗಳು ಕೇಳುವಿಕೆಗೆ ಸಹಾಯ ಮಾಡುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಶ್ರವಣೇಂದ್ರಿಯ ನರಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಕಾಕ್ಲಿಯರ್ ಇಂಪ್ಲಾಂಟ್ ಎಂಬ ಎಲೆಕ್ಟ್ರಾನಿಕ್ ಸಾಧನವನ್ನು ಬಳಸಬಹುದು.