ಬೆಂಗಳೂರು: ಕುಟುಂಬ ಸಮೇತ ಅಮರನಾಥ ಯಾತ್ರೆಗೆ ತೆರಳಿ ವಾಪಸ್ ಬಂದು ನೋಡಿದರೆ ಮನೆಯಲ್ಲಿದ್ದ ಚಿನ್ನಾಭರಣಗಳೇ ಮಾಯವಾಗಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕುಟುಂಬವೊಂದು ಇತ್ತೀಚೆಗೆ ಅಮರನಾಥ ಯಾತ್ರೆಗೆ ತೆರಳಿತ್ತು. ಯಾತ್ರೆ ಮುಗಿಸಿ ವಾಪಸ್ ಮನೆಗೆ ಬಂದಾಗ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮನೆಯವರು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕುಖ್ಯಾತ ಕಳ್ಳ ಚಿಕ್ಕಲಸಂದ್ರ ಮೂಲದ ವಡಿವೇಲು ರಾಮಸ್ವಾಮಿ (45) ಎಂಬಾತನನ್ನು ಬಂಧಿಸಿದ್ದಾರೆ. ಕಳೆದ 25 ವರ್ಷಗಳಿಂದ ಕಳ್ಳತನ ಮಾಡುವುದೇ ಇತನ ಕಾಯಕ. ಪ್ರವಾಸ, ಯಾತ್ರೆಗೆ ಹೋಗಿದ್ದವರ ಮನೆಯನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ ಮೊದಲು ಗ್ಯಾಂಗ್ ಕಟ್ಟಿಕೊಂಡು ಕಳ್ಳತನ ಮಾಡುತ್ತಿದ್ದ. ಬಳಿಕ ತಮಿಳುನಾಡಿಗೆ ಹೋಗಿ ವಾಸವಾಗಿದ್ದ ಈತ ವಾಪಸ್ ಬೆಂಗಳೂರಿಗೆ ಬಂದು ಒಂಟಿಯಾಗಿ ಕಳ್ಳತನ ಆರಂಭಿಸಿದ್ದ ಎನ್ನಲಾಗಿದೆ.ಬಂಧಿತನಿಂದ 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.