‘ಐಸ್ ಕ್ರೀಮ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಶ್ರೀನಿವಾಸ್ ಕಾಮತ್ ಅವರದ್ದು ಹೋರಾಟದ ಬದುಕು. ಹಣ್ಣು ಮಾರುವವನ ಮಗ ಕೋಟಿಗಟ್ಟಲೆ ಬೆಲೆಬಾಳುವ ಕಂಪನಿಯನ್ನೂ ಕಟ್ಟಬಹುದು ಎಂಬುದಕ್ಕೆ ಅವರೇ ನಿದರ್ಶನ. ರಘುನಂದನ್ ಅವರ ತಂದೆ ಗಾಡಿಯಲ್ಲಿ ಮಾವಿನ ಹಣ್ಣು ಮಾರುತ್ತಿದ್ದರು. ರಘುನಂದನ್ ಶ್ರೀನಿವಾಸ ಕಾಮತ್ ಜನಿಸಿದ್ದು ಬಡ ಕುಟುಂಬದಲ್ಲಿ. ಅವರ ತಂದೆ ಕರ್ನಾಟಕದ ಮಂಗಳೂರಿನ ಹಳ್ಳಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಮಾರುತ್ತಿದ್ದರು. 6 ಮಕ್ಕಳ ದೊಡ್ಡ ಕುಟುಂಬ ಅವರದ್ದು. ರಘುನಂದನ್ ಚಿಕ್ಕ ವಯಸ್ಸಿನಿಂದಲೇ ಕುಟುಂಬದ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು.
ತಂದೆಯೊಂದಿಗೆ ಗಾಡಿಯಲ್ಲಿ ಹಣ್ಣು ಮಾರುವ ಕೆಲಸ ಆರಂಭಿಸಿದರು. ಹಣ್ಣುಗಳ ಸರಿಯಾದ ಆಯ್ಕೆಯನ್ನು ಕಲಿತರು. ಹಣ್ಣನ್ನು ಬಹುಕಾಲ ಸಂರಕ್ಷಿಸುವುದು ಹೇಗೆ ಎಂಬ ಉಪಾಯವನ್ನೂ ತಮ್ಮ ತಂದೆಯಿಂದ ತಿಳಿದುಕೊಂಡರು. ಏನನ್ನಾದರೂ ಸಾಧಿಸಬೇಕೆಂಬ ಹಂಬಲದಲ್ಲಿ 14ನೇ ವಯಸ್ಸಿನಲ್ಲಿಯೇ ರಘುನಂದನ್ ಮುಂಬೈ ಸೇರಿದರು. ಆರಂಭದಲ್ಲಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ಅಲ್ಲೇ ಐಸ್ ಕ್ರೀಮ್ ಮಾಡಲು ಕಲಿತರು. ಉಳಿತಾಯದ ಹಣ ಮತ್ತು 4 ಸಿಬ್ಬಂದಿಯೊಂದಿಗೆ 1984 ರಲ್ಲಿ ರಘುನಂದನ್ ಸಣ್ಣ ಐಸ್ ಕ್ರೀಮ್ ಅಂಗಡಿಯನ್ನು ಪ್ರಾರಂಭಿಸಿದರು.
ನ್ಯಾಚುರಲ್ಸ್ ಐಸ್ ಕ್ರೀಮ್ ಬಿಡುಗಡೆ…
ರಘುನಂದನ್ ಮುಂಬೈನ ಜುಹುದಲ್ಲಿ ಮೊದಲ ಮಳಿಗೆಯನ್ನು ತೆರೆದರು. 10 ಫ್ಲೇವರ್ ಗಳ ಐಸ್ ಕ್ರೀಂ ಮಾರಾಟ ಆರಂಭಿಸಿದರು. ಅಂಗಡಿಗೆ ಗ್ರಾಹಕರನ್ನು ಆಕರ್ಷಿಸಲು ಐಸ್ ಕ್ರೀಮ್ ಜೊತೆಗೆ ಮುಂಬೈ ನಿವಾಸಿಗಳ ನೆಚ್ಚಿನ ಪಾವ್ ಭಾಜಿ, ವಡಾ ಪಾವ್ ಸಹ ಮಾಡಲು ಪ್ರಾರಂಭಿಸಿದರು. ಮಸಾಲೆಯುಕ್ತ ಪಾವ್ ಭಾಜಿ, ವಡಾ ಪಾವ್ ತಿಂದ ಬಳಿಕ ಗ್ರಾಹಕರು ಸಿಹಿಯಾದ ಐಸ್‌ಕ್ರೀಂ ಸವಿಯುತ್ತಿದ್ದರು. ಹಣ್ಣುಗಳು, ಹಾಲು ಮತ್ತು ಸಕ್ಕರೆಯಿಂದ ನೈಸರ್ಗಿಕವಾಗಿ ತಯಾರಿಸಿದ ಐಸ್ ಕ್ರೀಮ್ ಅನ್ನು ಜನರು ಇಷ್ಟಪಡಲಾರಂಭಿಸಿದರು. ಕ್ರಮೇಣ ರಘುನಂದನ್ ಅವರ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಜನಸಂದಣಿ ಹೆಚ್ಚಾಗತೊಡಗಿತು.
ಮೊದಲ ವರ್ಷ 5 ಲಕ್ಷ ವಹಿವಾಟು
ಮುಂಬೈನ ಪುಟ್ಟ ಅಂಗಡಿಯಲ್ಲಿ ರಘುನಂದನ್ ಮೊದಲ ವರ್ಷ 5 ಲಕ್ಷ ರೂಪಾಯಿ ವ್ಯವಹಾರ ಮಾಡಿದರು. ದಿನೇ ದಿನೇ ಐಸ್‌ಕ್ರೀಂನ ಅದ್ಭುತ ರುಚಿ ದೂರ ದೂರಕ್ಕೆ ತಲುಪಿತ್ತು. ಜನರು ಐಸ್ ಕ್ರೀಮ್ ಪಾರ್ಲರ್‌ನ ಹೊರಗೆ ಸಾಲುಗಟ್ಟಿ ನಿಲ್ಲುವಂತಾಯ್ತು. ಐಸ್ ಕ್ರೀಂನ ಸಂಪೂರ್ಣ ಬ್ರಾಂಡ್ ಕ್ರಿಯೇಟ್ ಮಾಡಲು ಅವರು ಇತರ ಸ್ನಾಕ್ಸ್‌ಗಳನ್ನು ನಿಲ್ಲಿಸಿದರು. 1994 ರಲ್ಲಿ ಇನ್ನೂ 5 ಮಳಿಗೆಗಳನ್ನು ತೆರೆದರು.
ರಾಸಾಯನಿಕ ರಹಿತವಾದ ಐಸ್‌ಕ್ರೀಂ ಮೂಲಕ ರಘುನಂದನ್ ಕಾಮತ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಕೆಲವೇ ವರ್ಷಗಳಲ್ಲಿ ಅವರು ದೇಶಾದ್ಯಂತ 135ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದರು. ಅವರ ಪರಿಶ್ರಮದಿಂದಾಗಿ ನ್ಯಾಚುರಲ್ಸ್ ಐಸ್ ಕ್ರೀಮ್ ವಹಿವಾಟು 400 ಕೋಟಿ ರೂಪಾಯಿ ದಾಟಿತ್ತು. 75 ವರ್ಷ ವಯಸ್ಸಿನ ರಘುನಂದನ್ ಕಾಮತ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಆದರೆ ಅವರ ಸಾಧನೆ ಮಾತ್ರ ಯುವ ಪೀಳಿಗೆಗೆ ಮಾದರಿಯಾಗಿದೆ.