ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಇದೀಗ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳತ್ತ ಮತ್ತೆ ಮರಳುತ್ತಿದ್ದಾರೆ. ಅನೇಕರ ಕಡೆಗಳಲ್ಲಿ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳ ಮಧ್ಯೆ ಪರದೆ ಅಥವಾ ಬೋರ್ಡ್ಗಳನ್ನು ಇಡುವ ಮೂಲಕ ಅವರನ್ನು ಪ್ರತ್ಯೇಕಿಸಲಾಗಿದೆ.
ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ತರಗತಿಗಳನ್ನೇ ನಡೆಸುವಂತೆ ತಾಲಿಬಾನಿ ನಾಯಕರು ಸೂಚನೆ ನೀಡಿದ್ದಾರೆ. ಇದು ಸಾಧ್ಯವಾಗದೇ ಹೋದ ಪಕ್ಷದಲ್ಲಿ ಪರದೆಗಳನ್ನು ಹಾಕುವಂತೆ ಸೂಚನೆ ನೀಡಲಾಗಿದೆ. ತರಗತಿಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಮಾತನಾಡಕೂಡದು ಎಂಬ ಸೂಚನೆ ಕೂಡ ಇದೆ.
1996-2001ರಲ್ಲಿ ತಾಲಿಬಾನಿಗಳು ಅಪ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿದ್ದ ವೇಳೆ ಹುಡುಗಿಯರಿಗೆ ಶಾಲೆಯಿಂದ ಹಾಗೂ ಯುವತಿಯರನ್ನು ವಿಶ್ವವಿದ್ಯಾಲಯದಿಂದ ಹೊರಗಿಡಲಾಗಿತ್ತು. ಮಹಿಳೆಯರಿಗೆ ನೌಕರಿ ಮಾಡಲು ಕೂಡ ನಿರ್ಬಂಧವಿತ್ತು.
ಆದರೆ ಈ ಭಾರಿ ಇಸ್ಲಾಮಿಕ್ ಕಾನೂನಿನ ಅನುಸಾರವಾಗಿ ಮಹಿಳಾ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ತಾಲಿಬಾನ್ ಹೇಳಿದೆ ಆದರೂ ಆ ರೀತಿಯ ಯಾವುದೇ ಕ್ರಮಗಳನ್ನು ಕೈಗೊಂಡಂತೆ ಕಾಣುತ್ತಿಲ್ಲ.
ಅಫ್ಘಾನಿಸ್ತಾನದ ಅತೀ ದೊಡ್ಡ ನಗರಗಳಾದ ಕಾಬೂಲ್, ಕಂದಹಾರ್ ಹಾಗೂ ಹೆರಾತ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಅಲ್ಲದೇ ಕ್ಯಾಂಪಸ್ನ ಕೆಲ ಭಾಗಗಳಿಗೆ ಎಂಟ್ರಿ ನೀಡುವುದಕ್ಕೂ ನಿರ್ಬಂಧ ಹೇರಿದ್ದಾರೆ ಎನ್ನಲಾಗಿದೆ.