ಜಗತ್ತಿನಲ್ಲಿ ಮಕ್ಕಳಿಲ್ಲದ ಎಷ್ಟೋ ದಂಪತಿಗಳಿದ್ದಾರೆ. ಮಗುವನ್ನು ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ, ಕಂಡ ಕಂಡ ದೇವರಿಗೆಲ್ಲ ಹರಕೆ ಹೊರುತ್ತಾರೆ. ಆದ್ರೆ ಚೀನಾದಲ್ಲಿ ದಂಪತಿ ಹಣಕ್ಕಾಗಿ ತಮ್ಮ ಪುಟ್ಟ ಮಗುವನ್ನು ಆಯಾ ಕೈಗೊಪ್ಪಿಸಿ ಪರಾರಿಯಾಗಿದ್ದಾರೆ.
ಪತ್ನಿಯ ಮಾಜಿ ಪತಿಯಿಂದ ಸುಮಾರು 460 ಕೋಟಿ ರೂಪಾಯಿ ಆಸ್ತಿ ಸಿಗಲಿದೆ ಎಂದು ಆಯಾಳನ್ನು ನಂಬಿಸಿದ ದಂಪತಿ ತಮ್ಮ 5 ತಿಂಗಳ ಮಗುವನ್ನು ಆಕೆಯ ಕೈಗೊಪ್ಪಿಸಿದ್ದಾರೆ. ಶೀಘ್ರವೇ ಮರಳಿ ಬರುತ್ತೇವೆ, ನಿನಗೂ 12.5 ಕೋಟಿ ರೂಪಾಯಿ ಕೊಡುತ್ತೇವೆಂದು ಆಕೆಯನ್ನು ನಂಬಿಸಿ ಹೊರಟುಹೋಗಿದ್ದಾರೆ.
ಆದರೆ ಈ ದಂಪತಿ ಮಗುವಿನ ನಿಜವಾದ ಪೋಷಕರಲ್ಲ ಎಂಬ ಅನುಮಾನವೀಗ ಮೂಡಿದೆ. ಯಾವುದೋ ವಂಚನೆಗೆ ಮಗುವನ್ನು ಬಳಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೆಲಸಕ್ಕೆ ಸೇರಿಸಿಕೊಳ್ಳುವಾಗ ದಾದಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ವೇತನ ಕೊಡುವುದಾಗಿ ದಂಪತಿ ಹೇಳಿದ್ದರು. ಆದರೆ ನಯಾಪೈಸೆ ಕೊಟ್ಟಿರಲಿಲ್ಲ. ಇದಲ್ಲದೆ ದಾದಿಯ ಬಳಿ 7.20 ಲಕ್ಷ ಹಣವನ್ನು ಎರವಲು ಪಡೆದಿದ್ದರು. ಅದನ್ನೂ ವಾಪಸ್ ಮಾಡದೇ ಮಗುವನ್ನು ಅವಳ ಕೈಗೊಪ್ಪಿಸಿ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ.
ತನ್ನ ಉಳಿತಾಯದ ಹಣವನ್ನೂ ದಂಪತಿಗೆ ನೀಡಿದ ಮಹಿಳೆ ಮೋಸ ಹೋಗಿದ್ದಾಳೆ. ಜೊತೆಗೆ ಮಗುವನ್ನು ನೋಡಿಕೊಳ್ಳುವ ಜವಾಬ್ಧಾರಿ ಕೂಡ ಅವಳ ಹೆಗಲೇರಿದೆ. ದಂಪತಿ ತಮ್ಮ ಬಳಿಯಿರುವ ಐಷಾರಾಮಿ ವಾಚ್‌ಗಳು ಮತ್ತು ಚಿನ್ನದ ಫೋಟೋ ತೋರಿಸಿ ಮಹಿಳೆಯಿಂದ ಹಣ ಪಡೆದಿದ್ದಾರೆ. ಆಸ್ತಿಗೆ ಹಕ್ಕುಪತ್ರ ಪಡೆಯುವ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದ್ದರು.