ಮೇ 25 ರಂದು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ಆತ್ಮಹತ್ಯೆ ಪ್ರಕರಣ ವಿಲಕ್ಷಣ ಕಾರಣಕ್ಕೆ ನಡೆದಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಬೇಯಿಸಿದ ಮೊಟ್ಟೆ ಹಂಚಿಕೊಳ್ಳಲು ದಂಪತಿ ಕಿತ್ತಾಟ ನಡೆಸಿದ ಬಳಿಕ ಮನನೊಂದ ಪತ್ನಿ ತಾವು ವಾಸವಿದ್ದ ಬಿಲ್ಡಿಂಗ್ ನಿಂದ ಕೆಳಕ್ಕೆ ಹಾರಿ ಸಾವಿಗೀಡಾಗಿರುವುದು ಖಚಿತ ಪಟ್ಟಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಚೋಹಳ್ಳಿಯಲ್ಲಿರುವ ಬಣ್ಣದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಅನಿಲ್ ಕುಮಾರ್ ಎಂಬಾತನ ಪತ್ನಿ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ನಡೆದ ದಿನದಂದು ರಾತ್ರಿ ಊಟಕ್ಕೆ ಕುಳಿತಾಗ ಮೊಟ್ಟೆ ಹಂಚಿಕೊಳ್ಳಲು ಕಿತ್ತಾಟ ನಡೆಸಿದ್ದಾರೆ.
ತಾನು ಕುಟುಂಬದ ಮುಖ್ಯಸ್ಥನಾಗಿರುವ ಕಾರಣ ಜಾಸ್ತಿ ಮೊಟ್ಟೆ ನೀಡಬೇಕೆಂದು ಅನಿಲ್ ಕುಮಾರ್ ತಾಕೀತು ಮಾಡಿದ್ದು, ಇದಕ್ಕೆ ಪೂಜಾ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ಕ್ಷುಲ್ಲಕ ಕಾರಣಕ್ಕೆ ಇಬ್ಬರು ವಾಗ್ವಾದ ನಡೆಸಿದ್ದು ಈ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಿದ ಅನಿಲ್ ಕುಮಾರ್ ಮಕ್ಕಳ ಜೊತೆ ಹೊರಗೆ ಹೋಗಿದ್ದಾನೆ. ಅಲ್ಲದೆ ಅದಕ್ಕೂ ಮುನ್ನ ನಿನಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ಪತ್ನಿಯನ್ನು ಹಂಗಿಸಿದ್ದಾನೆ.
ಇದರಿಂದ ಮನನೊಂದ ಪೂಜಾ ತಾನು ವಾಸವಿದ್ದ ಕಟ್ಟಡದಿಂದ ಕೆಳಗೆ ಹಾರಿದ್ದು ಸಾವನ್ನಪ್ಪಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಮನೆಗೆ ಬಂದ ಅನಿಲ್ ಪತ್ನಿ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ನೆರೆಹೊರೆಯವರ ಸಹಾಯದಿಂದ ಹುಡುಕಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಬಂದಿತ್ತು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅನಿಲ್ ಕುಮಾರ್ ನನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.