alex Certify ಇಲ್ಲಿದೆ ʼಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ʼ ನಲ್ಲಿ ದಾಖಲಾಗಿರುವ ಕ್ರೀಡಾಪಟುಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ʼ ನಲ್ಲಿ ದಾಖಲಾಗಿರುವ ಕ್ರೀಡಾಪಟುಗಳ ಪಟ್ಟಿ

ಭಾರತವು ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ ನಲ್ಲಿ ದಾಖಲಾಗಿರುವ, ಭಾರತದ ಕ್ರೀಡಾ ಪರಂಪರೆಯನ್ನು ಸಾರುವ ಅಸಾಮಾನ್ಯ ಸಾಧನೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದೇವೆ. ಪ್ರತಿಯೊಂದು ಗೆಲುವನ್ನೂ ಹಬ್ಬದಂತೆ ಆಚರಿಸುವ ನಮ್ಮ ದೇಶದಲ್ಲಿ ನಾವು ಓಡುವ, ಆಡುವ, ಅಸಾಮಾನ್ಯ ಸಾಧನೆ ಮಾಡುವ ಹಾಗೂ ಆ ಮೂಲಕ ಇತಿಹಾಸ ನಿರ್ಮಿಸುವ ನಮ್ಮ ಕ್ರೀಡಾಪಟುಗಳನ್ನು ಗೆಲುವನ್ನು ಮನದುಂಬಿ ಆನಂದಿಸುತ್ತೇವೆ.

ಹೊಸ ವಿಶ್ವ ದಾಖಲೆಗಳನ್ನು ಸ್ಥಾಪಿಸುವುದರಿಂದ ಹಿಡಿದು ಹೊಸ ಪೀಳಿಗೆಗೆ ಸ್ಫೂರ್ತಿ ನೀಡುವವರೆಗೆ ಅಸಾಧಾರಣ ಸಾಧನೆ ಮಾಡುವ ಭಾರತೀಯ ಕ್ರೀಡಾಪಟುಗಳು ಭಾರತದ ಮೊದಲ ದಾಖಲೆ ಪುಸ್ತಕವಾಗಿರುವ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಳಿಸಲು ಮತ್ತಷ್ಟು ಶ್ರಮ ವಹಿಸಲು ಉತ್ಸುಕರಾಗಿರುತ್ತಾರೆ. ಪ್ರಸ್ತುತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನ 33ನೇ ಆವೃತ್ತಿ ಪ್ರಕಟವಾಗಿದೆ. ಈ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ದೇಶದಲ್ಲಿನ ಪ್ರತಿಯೊಂದು ವಿಸ್ಮಯಕಾರಿ ಮತ್ತು ಸ್ಫೂರ್ತಿದಾಯಕ ಸಾಹಸ ಸಾಧನೆಗಳನ್ನು ದಾಖಲಿಸಿದ್ದು, ನಮ್ಮ ದೇಶದ ಕ್ರೀಡೋತ್ಸಾಹದ ಸಾರವನ್ನು ಕಟ್ಟಿಕೊಡುತ್ತದೆ ಮತ್ತು ಲಕ್ಷಾಂತರ ಓದುಗರ ಹೃದಯದಲ್ಲಿ ಸ್ಫೂರ್ತಿ, ಹೆಮ್ಮೆಯ ಕಿಡಿಯನ್ನು ಹೊತ್ತಿಸಲಿದೆ. ಅವುಗಳ ಕೆಲ ಉದಾಹರಣೆ ಇಲ್ಲಿ ನೋಡಬಹುದು.

ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಫೆನ್ಸರ್ – ಸಿ.ಎ. ಭವಾನಿ ದೇವಿ ಅವರು 2023ರಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಫೆನ್ಸರ್ ಎನಿಸಿಕೊಂಡರು.

ಏಷ್ಯನ್ ಗೇಮ್ಸ್ ನ ಶೂಟಿಂಗ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಮಹಿಳಾ ಆಟಗಾರ್ತಿಯರು- ತೆಲಂಗಾಣದ 18 ವರ್ಷದ ಪಿಸ್ತೂಲ್ ಶೂಟರ್ ಶೂಟರ್ ಇಶಾ ಸಿಂಗ್ 2023ರ ಏಷ್ಯನ್ ಗೇಮ್ಸ್‌ ನಲ್ಲಿ ಅತಿ ಹೆಚ್ಚು ಪದಕ ಗೆದ್ದು ಅತ್ಯಂತ ಯಶಸ್ವಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಈ ಗೇಮ್ಸ್ ನಲ್ಲಿ ಒಟ್ಟು ನಾಲ್ಕು ಪದಕಗಳನ್ನು ಗೆದ್ದಿದ್ದಾರೆ. ಆ ಸಾಧನೆಯ ವಿವರ ಹೀಗಿವೆ: ಮಹಿಳೆಯರ 25 ಮೀ ಪಿಸ್ತೂಲ್ ಟೀಮ್ ಸ್ಪರ್ಧೆಯಲ್ಲಿ ಚಿನ್ನ ಮತ್ತು 25 ಮೀ ಏರ್ ಪಿಸ್ತೂಲ್ (ವೈಯಕ್ತಿಕ), 10 ಮೀ ಏರ್ ಪಿಸ್ತೂಲ್ (ವೈಯಕ್ತಿಕ) ಮತ್ತು 10 ಮೀ ಏರ್ ಪಿಸ್ತೂಲ್ (ತಂಡ) ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧಿಸಿ ಮೂರು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಆಕೆಯ ಅದ್ಭುತ ಪ್ರದರ್ಶನವು ದೇಶದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ದೀಪವಾಗಿದೆ.

ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಆಟಗಾರ- ವಿರಾಟ್ ಕೊಹ್ಲಿ 2023ರಲ್ಲಿ 765 ರನ್ ಗಳಿಸುವ ಮೂಲಕ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2003ರಲ್ಲಿ ಸಚಿನ್ ತೆಂಡೂಲ್ಕರ್ ದಾಖಲಿಸಿದ್ದ 673 ರನ್‌ಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ.

ಏಷ್ಯನ್ ಗೇಮ್ಸ್‌ ನ ಸ್ಕ್ವಾಷ್‌ನಲ್ಲಿ ಮಿಶ್ರ ಡಬಲ್ಸ್ ಚಿನ್ನದ ಪದಕ ಗೆದ್ದ ಮೊದಲ ಜೋಡಿ- 2022ರ ಏಷ್ಯನ್ ಗೇಮ್ಸ್‌ ನ ಸ್ಕ್ವಾಷ್‌ ಪಂದ್ಯಾಟದಲ್ಲಿ ಮಿಶ್ರ ಡಬಲ್ಸ್ ಚಿನ್ನದ ಪದಕ ಗೆದ್ದ ಮೊದಲ ಜೋಡಿ ಎಂಬ ಹೆಗ್ಗಳಿಕೆ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಅವರ ಪಾಲಿಗಿದೆ.

ಡೈಮಂಡ್ ಲೀಗ್‌ನಲ್ಲಿ ಪೋಡಿಯಂ ನಲ್ಲಿ ಸ್ಥಾನ ಗಳಿಸಿದ ಲಾಂಗ್ ಜಂಪ್ ಆಟಗಾರ- ಕೇರಳದ ಲಾಂಗ್ ಜಂಪ್ ಆಟಗಾರ ಮುರಳಿ ಶ್ರೀಶಂಕರ್ ಅವರು ಡೈಮಂಡ್ ಲೀಗ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದು ಪೋಡಿಯಂನಲ್ಲಿ ಸ್ಥಾನ ಗಳಿಸಿದ ಮೊದಲ ಭಾರತೀಯ ಲಾಂಗ್ ಜಂಪರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಅವರು 2023ರಲ್ಲಿ ನಡೆದ ಪ್ಯಾರಿಸ್ ಡೈಮಂಡ್ ಲೀಗ್ ನಲ್ಲಿ 8.09 ಮೀಟರ್‌ಗಳ ದೂರವನ್ನು ಜಿಗಿಯುವುದರ ಮೂಲಕ ಮೂರನೇ ಸ್ಥಾನ ಪಡೆದರು. ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಮತ್ತು ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಬಳಿಕ ಡೈಮಂಡ್ ಲೀಗ್‌ಗಳಲ್ಲಿ ಅಗ್ರ ಮೂರು ಸ್ಥಾನ ಗಳಿಸಿದ ಕೆಲವೇ ಭಾರತೀಯರಲ್ಲಿ ಮುರಳಿ ಶಂಕರ್ ಕೂಡ ಒಬ್ಬರಾಗಿದ್ದಾರೆ.

ಸುದೀರ್ಘವಾದ ಬಕಾಸನ- ಉತ್ತರ ಪ್ರದೇಶದ ಬಲರಾಂಪುರದ ವೀರೇಂದ್ರ ವಿಕ್ರಮ್ ಸಿಂಗ್ (ಜ.2 ಡಿಸೆಂಬರ್ 1954) ಅವರು 16 ಮೇ 2022ರಂದು ಬಲರಾಂಪುರದ ಎಂಪಿಪಿ ಇಂಟರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಜೆ 6:10 ರಿಂದ 6:15ರವರೆಗೆ ಸುದೀರ್ಘ 5 ನಿಮಿಷಗಳ ಕಾಲ ಬಕಾಸನ (ಕ್ರೇನ್ ಭಂಗಿ) ಭಂಗಿಯನ್ನು ಪ್ರದರ್ಶಿಸಿದ ಸಾಧನೆ ಮಾಡಿದ್ದಾರೆ.

ಬಿಲ್ಲುಗಾರಿಕೆಯಲ್ಲಿ ಕಿರಿಯ ವಿಶ್ವ ಚಾಂಪಿಯನ್- ಹದಿಹರೆಯದ ಬಿಲ್ಲುಗಾರ್ತಿ ಅದಿತಿ ಸ್ವಾಮಿ ಅವರು 2023ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ವಿಶ್ವಕಪ್ ಯುಗದ (2006 ರಿಂದ) ಬಳಿಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಹಿರಿಯ ವಿಶ್ವ ಚಾಂಪಿಯನ್ ಎನ್ನಿಸಿಕೊಂಡರು.

ಅತಿ ವೇಗವಾಗಿ ಜಿಕ್ಯೂ ದಂಡಯಾತ್ರೆ ಸಾಧನೆ ಮಾಡಿದ ಮಹಿಳೆಯರ ಗುಂಪು – ಸುಕ್ರತಿ ಸಕ್ಸೇನಾ, ರೂಪಮ್ ದೇವೆದಿ, ಸ್ವರಾಂಜಲಿ ಸಕ್ಸೇನಾ ಮತ್ತು ಅಪಾಲ ರಾಜವಂಶಿ ಅವರು ಗೋಲ್ಡನ್ ಕ್ವಾಡ್ರಿಲ್ಯಾಟರಲ್ (ಜಿಕ್ಯೂ) ನ 6,263 ಕಿಮೀ ದೂರದ ದಂಡಯಾತ್ರೆಯನ್ನು 6 ದಿನ 14 ಗಂಟೆ 5 ನಿಮಿಷಗಳಲ್ಲಿ ಪೂರ್ಣಗೊಳಿಸಿ ಮಹಾ ಸಾಧನೆ ಮಾಡಿದ್ದಾರೆ. ಅವರು ತಮ್ಮ ಸಾಹಸಯಾತ್ರೆಯನ್ನು 10 ಮೇ 2023ರಂದು ನವದೆಹಲಿಯ ಇಂಡಿಯಾ ಗೇಟ್‌ ನಲ್ಲಿ 1:35 ಗಂಟೆಗೆ ಪ್ರಾರಂಭಿಸಿದ್ದರು ಮತ್ತು 16 ಮೇ 2023 ರಂದು ನವದೆಹಲಿಯ ಸುಬ್ರತೋ ಪಾರ್ಕ್ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಸಂಜೆ 4:30ಕ್ಕೆ ಈ ಯಾತ್ರೆ ಮುಕ್ತಾಯಗೊಳಿಸಿದರು.

ಅಡ್ವೆಂಚರ್ (ಡಬ್ಲ್ಯೂಆರ್): ಸಾಗರದ ಓಶಿಯನ್ಸ್ ಸೆವೆನ್ ಚಾಲೆಂಜ್ ಅನ್ನು ಪೂರ್ಣಗೊಳಿಸಿದ ವಿಶ್ವದ ಅತ್ಯಂತ ಕಿರಿಯ ಈಜುಪಟು- ಅವರು 1ನೇ ಮಾರ್ಚ್ 2023ರಂದು ತನ್ನ 23ನೇ ವಯಸ್ಸಿನಲ್ಲಿ ಓಶಿಯನ್ಸ್ ಸೆನೆವ್ ಚಾಲೆಂಜ್ ಅನ್ನು ಪೂರ್ಣಗೊಳಿಸಿದ ವಿಶ್ವದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಸಾಧನೆ ಮಾಡಿದ್ದಾರೆ. ಅಸಮರ್ಪಕ ಹವಾಮಾನ ಇದ್ದರೂ ಅವರು ನ್ಯೂಜಿಲೆಂಡ್‌ನ ಉತ್ತರ ಮತ್ತು ದಕ್ಷಿಣ ದ್ವೀಪಗಳ ನಡುವಿನ ಕುಕ್ ಜಲಸಂಧಿಯನ್ನು ಕೇವಲ 8 ಗಂಟೆ 41 ನಿಮಿಷಗಳಲ್ಲಿ ದಾಟುವ ಮೂಲಕ ಈ ಅಸಾಧ್ಯ ಸವಾಲನ್ನು ಪೂರ್ಣಗೊಳಿಸಿದರು. ಇದಕ್ಕಾಗಿ ಅವರು ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು (2018) ಪಡೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...