![](https://kannadadunia.com/wp-content/uploads/2023/04/೨೨೩೩೪೫-1024x572.png)
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಬಿಜೆಪಿ ಮತ್ತು ಶಿವಸೇನೆಯ ಸದಸ್ಯರೊಂದಿಗೆ ಒಂದು ದಿನದ ಅಯೋಧ್ಯಾ ಪ್ರವಾಸ ಕೈಗೊಂಡಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ಭವ್ಯವಾದ ರಾಮಮಂದಿರದ ಪಕ್ಷಿನೋಟವನ್ನು ದೇವೇಂದ್ರ ಫಡ್ನವೀಸ್ ಹಂಚಿಕೊಂಡಿದ್ದು, ಸ್ವತಃ ಅವರೇ ಹೆಲಿಕಾಪ್ಟರ್ ಮೂಲಕ ತಮ್ಮ ಮೊಬೈಲ್ ನಲ್ಲಿ ಈ ಸುಂದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಇದನ್ನು ಹಂಚಿಕೊಂಡಿರುವ ದೇವೇಂದ್ರ ಫಡ್ನವೀಸ್, “ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಹೀಗೆ. ಲಕ್ನೋದಿಂದ ಅಯೋಧ್ಯೆಗೆ ಹೋಗುವ ಮಾರ್ಗದಲ್ಲಿ ಚಾಪರ್ ನಿಂದ ಏರಿಯಲ್ ನೋಟ. ಜೈ ಶ್ರೀ ರಾಮ್” ಎಂದು ಬರೆದುಕೊಂಡಿದ್ದಾರೆ.
ತಮ್ಮ ಈ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ‘ಮಹಾ ಆರತಿ’ ನಡೆಸಿದ್ದಾರೆ.
ಇದರ ಹಿಂದಿನ ದಿನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ದೇವಾಲಯ ನಿರ್ಮಾಣವಾಗುತ್ತಿದ್ದರೂ ಉದ್ಘಾಟನಾ ದಿನಾಂಕವನ್ನು ಪ್ರಕಟಿಸದಿರುವುದರ ಕುರಿತು ವ್ಯಂಗ್ಯವಾಡಿದ್ದ ಉದ್ದವ್ ಠಾಕ್ರೆ ಬಣದ ಶಿವಸೇನಾ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಕಾಮಗಾರಿಗೆ ಚಾಲನೆ ನೀಡಿದ್ದು, ಕೋಟ್ಯಂತರ ರಾಮಭಕ್ತರ ಕನಸು ನನಸಾಗುತ್ತಿದೆ. ದಿನಾಂಕ ಕೇಳುವವರಿಗೂ ಮನೆ ದಾರಿ ತೋರಿಸಲಾಗಿದೆ ಎಂದು ಶಿಂಧೆ ವ್ಯಂಗ್ಯವಾಡಿದ್ದರು.
ನವೆಂಬರ್ 2019 ರಲ್ಲಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ದೇವಾಲಯದ ಪರವಾಗಿ ಸರ್ವಾನುಮತದಿಂದ ತೀರ್ಪು ನೀಡುವ ಮೂಲಕ ದಶಕಗಳಷ್ಟು ಹಳೆಯ ವಿವಾದವನ್ನು ಕೊನೆಗೊಳಿಸಿ ದೇವಾಲಯದ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತ್ತು. ಇದೀಗ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ವರ್ಷದ ಜನವರಿಯಲ್ಲಿ ಉದ್ಘಾಟನೆಯಾಗುವ ನಿರೀಕ್ಷೆಯಿದೆ.