ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಈ ಹಿಂದಿನ ಸರ್ಕಾರ, ಪುರುಷ ಮತ್ತು ಮಹಿಳೆಯರ ವಿವಾಹದ ವಯಸ್ಸಿನಲ್ಲಿ ಏಕರೂಪತೆ ತರುವ ಉದ್ದೇಶದಿಂದ ಮಸೂದೆಯೊಂದನ್ನು ಮಂಡಿಸಿದ್ದು, ಆದರೆ ಲೋಕಸಭೆ ವಿಸರ್ಜನೆಯಾದ ಕಾರಣ ಅಂಗೀಕಾರವಿಲ್ಲದೆ ಬಿದ್ದುಹೋಗಿದೆ.
ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ 2021 ನ್ನು ಮೋದಿ ಸರ್ಕಾರವು 2021ರ ಡಿಸೆಂಬರ್ ನಲ್ಲಿ ಲೋಕಸಭೆಯಲ್ಲಿ ಮಂಡಿಸಿದ್ದು, ಬಳಿಕ ಇದರ ಪರಿಶೀಲನೆಗಾಗಿ ಮಹಿಳಾ, ಮಕ್ಕಳು, ಯುವಜನ ಮತ್ತು ಕ್ರೀಡಾ ವ್ಯವಹಾರ ಕುರಿತ ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿತ್ತು.
ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸು 21 ವರ್ಷಕ್ಕೆ ಏರಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಇದಕ್ಕಾಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಕ್ಕೆ ತಿದ್ದುಪಡಿ ತರುವ ಉದ್ದೇಶವನ್ನು ಹೊಂದಲಾಗಿತ್ತು. ಮಸೂದೆ ಪರಿಶೀಲನೆಗಾಗಿ ಸ್ಥಾಯಿ ಸಮಿತಿಯ ಕಾಲಾವಧಿಯನ್ನು ಕೆಲ ಬಾರಿ ವಿಸ್ತರಿಸಲಾಗಿತ್ತು. ಆದರೆ ಅಂತಿಮವಾಗಿ 17 ನೇ ಲೋಕಸಭೆ ಅವಧಿ ಪೂರ್ಣಗೊಂಡಿದ್ದು, ಹೀಗಾಗಿ ಈ ಮಸೂದೆ ಅಂಗೀಕಾರವಿಲ್ಲದೆ ಬಿದ್ದುಹೋಗಿದೆ. ಈಗ ಅಸ್ತಿತ್ವಕ್ಕೆ ಬರುತ್ತಿರುವ ಮೋದಿ 3.O ಸರ್ಕಾರ ಮಸೂದೆಯನ್ನು ಮುಂದಿನ ದಿನಗಳಲ್ಲಿ ಮತ್ತೆ ಮಂಡಿಸುತ್ತದಾ ಎಂಬುದನ್ನು ಕಾಯ್ದು ನೋಡಬೇಕಿದೆ.