ವೈದ್ಯಲೋಕಕ್ಕೇ ಅಚ್ಚರಿ ಮೂಡಿಸುವ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. 4 ಶಿಶುಗಳ ಗಾತ್ರಕ್ಕಿಂತಲೂ ದೊಡ್ಡದಾದ ಗಡ್ಡೆಯನ್ನು ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಹೊರತೆಗೆಯಲಾಗಿದೆ. ದುಬೈ ವಾಯುಪಡೆಯ ಮಾಜಿ ನೌಕರನಾಗಿರೋ ಈತ ನಿವೃತ್ತಿ ಬಳಿಕ ರಾಜಸ್ತಾನದಲ್ಲಿ ನೆಲೆಸಿದ್ದಾರೆ.
77 ವರ್ಷದ ಈ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಹೊಟ್ಟೆ ನೋವು ಮತ್ತು ಒತ್ತಡದಿಂದ ಬಳಲುತ್ತಿದ್ದರು. ಕಾಲುಗಳಲ್ಲಿ ಊತ ಮತ್ತು ಉಸಿರಾಟದ ತೊಂದರೆಯೂ ಇತ್ತು. ಕಾರಣ ತಿಳಿಯಲು ವೈದ್ಯರ ಬಳಿ ಹೋದಾಗ ಸ್ಕ್ಯಾನಿಂಗ್‌ನಲ್ಲಿ ಕಂಡು ಬಂದ ದೃಶ್ಯ ವೈದ್ಯರನ್ನೇ ಬೆಚ್ಚಿಬೀಳಿಸಿದೆ.
ವೃದ್ಧನ ಹೊಟ್ಟೆಯಲ್ಲಿ ಭಾರೀ ಗಾತ್ರದ ಗಡ್ಡೆಯಿತ್ತು. ಗಡ್ಡೆಯ ತೂಕ 14 ಕೆಜಿ. ಇದು 4 ನವಜಾತ ಶಿಶುಗಳಿಗೆ ಸಮಾನವಾಗಿದೆ. ಗಡ್ಡೆಯನ್ನು ಹೊರತೆಗೆಯಲು ವೈದ್ಯರ ತಂಡ ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ. ಶಸ್ತ್ರಚಿಕಿತ್ಸೆಯ ನಂತರ ರೋಗಿ ಬಚಾವ್ ಆಗಿದ್ದು, ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಮಾಡಲಾಗಿದೆ.
ಹೊಟ್ಟೆಯಲ್ಲಿದ್ದ ಗಡ್ಡೆಯ ಗಾತ್ರ 75X45 ಸೆಮೀ ಆಗಿತ್ತು. ಇದರಿಂದಾಗಿ ಹೊಟ್ಟೆಯಲ್ಲಿದ್ದ ಇತರ ಅಂಗಗಳು ಮುಚ್ಚಿಹೋಗಿದ್ದವು. ಯಕೃತ್ತು, ಮೂತ್ರಪಿಂಡ, ಕರುಳು, ಮೂತ್ರಕೋಶ ಎಲ್ಲವಕ್ಕೂ ಸಮಸ್ಯೆಯಾಗುತ್ತಿತ್ತು. ಅಷ್ಟೇ ಅಲ್ಲ ಟ್ಯೂಮರ್ ಸಂಪೂರ್ಣವಾಗಿ ಕರುಳನ್ನು ದೇಹದ ಎಡಭಾಗಕ್ಕೆ ಸ್ಥಳಾಂತರಿಸಿತ್ತು.
ಡಾ. ಸೌಮಿತ್ರಾ ರಾವತ್ ನೇತೃತ್ವದಲ್ಲಿ ಕ್ಲಿಷ್ಟಕರವಾದ ಸರ್ಜರಿ ನಡೆಸಲಾಗಿದೆ. ಸದ್ಯ ಲ್ಯಾಪ್ರೋಸ್ಕೋಪಿಕ್ ಅಥವಾ ರೋಬೋಟಿಕ್ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಆದರೆ ಈ ವಿಧಾನಗಳ ಮೂಲಕ ಉಪಕರಣವನ್ನು ಸೇರಿಸಲು ಹೊಟ್ಟೆಯಲ್ಲಿ ಸ್ಥಳಾವಕಾಶವಿರಲಿಲ್ಲ. ಹಾಗಾಗಿ ವೈದ್ಯರ ತಂಡ ಹಳೆಯ ಸಾಂಪ್ರದಾಯಿಕ ವಿಧಾನದ ಮೂಲಕವೇ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.