
ಮೂರು ವರ್ಷದ ಬಾಲಕಿಯೊಬ್ಬಳಿಗೆ ತನ್ನ ಕೋಣೆಯಲ್ಲಿ ಭೂತ-ದೆವ್ವಗಳೇ ಶಬ್ಧ ಮಾಡಿದಂತೆನಿಸುತ್ತಿತ್ತು. ಸದಾ ವಿಚಿತ್ರ ಶಬ್ಧ ಕೇಳಿಸುತ್ತಲೇ ಇತ್ತು. ಸೈಲರ್ ಎಂಬ ಈ ಬಾಲಕಿಯ ಮಾತುಗಳನ್ನು ಹೆತ್ತವರು ಗಂಭೀರವಾಗಿ ಪರಿಗಣಿಸಲಿಲ್ಲ. ಆಕೆಯ ಭ್ರಮೆ ಎಂದುಕೊಂಡು ಸುಮ್ಮನಾಗಿದ್ದರು.
ಉತ್ತರ ಕೆರೊಲಿನಾದ ಷಾರ್ಲೆಟ್ ನಗರದಲ್ಲಿರುವ ಕುಟುಂಬ ಇದು. ತೋಟದ ಮನೆಯಲ್ಲಿ ಇವರು ವಾಸವಾಗಿದ್ದಾರೆ. ಪುಟ್ಟ ಬಾಲಕಿ ಸೈಲರ್ ತನ್ನ ಕೋಣೆಯ ಗೋಡೆಯಲ್ಲಿ ದೈತ್ಯಾಕಾರದ ದೆವ್ವವಿದೆ ಎಂದೆಲ್ಲ ಮಾತನಾಡುತ್ತಿದ್ದಳು. ಆಕೆಯ ತಾಯಿ ಆಶ್ಲೇ ಮಾಸ್ಸಿ ಕ್ಲಾಸ್ ಮೂಲತಃ ಹೋಮ್ ಡಿಸೈನರ್.
ಇತ್ತೀಚೆಗೆ ನೋಡಿದ ಮಾನ್‌ಸ್ಟರ್ಸ್‌ಇಂಕ್ ಎಂಬ ಸಿನೆಮಾದಿಂದ ಪ್ರಭಾವಿತಳಾಗಿ ಮಗಳು ದೆವ್ವದ ಬಗ್ಗೆ ಮಾತನಾಡುತ್ತಿದ್ದಾಳೆ ಎಂದುಕೊಂಡಿದ್ದಳು. ಆಕೆಯನ್ನು ಸಮಾಧಾನ ಮಾಡಲು ನೀರಿನ ಬಾಟಲಿ ಕೊಡುತ್ತಿದ್ದಳು. ರಾತ್ರಿ ದೆವ್ವವೇನಾದರೂ ಬಂದರೆ ಈ ಸ್ಪ್ರೇ ಹಾಕಿಬಿಡು ಎಂದು ಮಗುವಿಗೆ ಸೂಚಿಸಿದ್ದಳು.
ಆದರೆ ಆ ಕೋಣೆಯಲ್ಲಿ ನಡೆದಿದ್ದೇ ಬೇರೆ. ಕೀಟ ನಿಯಂತ್ರಣಕ್ಕಾಗಿ ಸಿಬ್ಬಂದಿ ಬಂದಾಗ ದೆವ್ವದ ಅಸಲಿಯತ್ತು ಬಯಲಾಗಿದೆ. ಆ ಕೋಣೆಯಲ್ಲಿ ಸಾವಿರಾರು ಜೇನುನೊಣಗಳು ವಾಸವಾಗಿದ್ದವು. ದಿನವಿಡೀ ಜೇನುನೊಣಗಳು ಝೇಂಕರಿಸುವ ಸದ್ದು ಬಾಲಕಿಯನ್ನು ಭಯಪಡಿಸಿತ್ತು. ಅದನ್ನೇ ಆಕೆ ದೆವ್ವ ಎಂದುಕೊಂಡಿದ್ದಳು. ರಹಸ್ಯ ಬಯಲಾಗುತ್ತಿದ್ದಂತೆ ಸಿಬ್ಬಂದಿ ಜೇನುನೊಣಗಳನ್ನು ರಕ್ಷಿಸಿ ಕೊಂಡೊಯ್ದಿದ್ದಾರೆ.