ತನ್ನ ಹುಟ್ಟುಹಬ್ಬದ ದಿನದಂದೇ ಹದಿನಾರು ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಮೃತಪಟ್ಟಿದ್ದು, ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಸಂಭ್ರಮಿಸಬೇಕಿದ್ದ ಕುಟುಂಬ ಸದಸ್ಯರು ಶೋಕದ ಮಡುವಿನಲ್ಲಿ ಮೃತ ದೇಹದ ಪಕ್ಕ ಕೇಕ್ ಕತ್ತರಿಸಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಆಸೀಫಾಬಾದ್ ಜಿಲ್ಲೆಯ ಬಾಬಾಪುರದ ಸಚಿನ್ ಎಂಬ ಬಾಲಕ ಶುಕ್ರವಾರದಂದು ಹದಿನಾರನೇ ವಸಂತಕ್ಕೆ ಕಾಲಿಟ್ಟಿದ್ದು, ಇದರ ಅದ್ದೂರಿ ಆಚರಣೆಗಾಗಿ ಕುಟುಂಬ ಸದಸ್ಯರು ದೊಡ್ಡ ಕೇಕ್ ತಂದು ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.
ಇದರ ಮಧ್ಯೆ ಮನೆಯಿಂದ ಹೊರ ಹೋಗಿದ್ದ ಸಚಿನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದ. ಈ ಘಟನೆಯಿಂದ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದು, ಮೃತದೇಹ ಮನೆಗೆ ತಂದಾಗ ಹುಟ್ಟು ಹಬ್ಬದ ಆಚರಣೆಗಾಗಿ ತಾವು ತಂದಿರಿಸಿದ್ದ ಕೇಕ್ ಅನ್ನು ಕತ್ತರಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.