ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 13 ವರ್ಷದ ಬಾಲಕಿಯ ಮೇಲೆ ಆಕೆಯ ಅಣ್ಣನ ಸ್ನೇಹಿತ ಗೆಳೆಯರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ.
ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಇಬ್ಬರಿಗಾಗಿ ಹುಡುಕಾಟ ನಡೆಸಲಾಗಿದೆ.
ಬಾಲಕಿಯ ಅಣ್ಣನ ಸ್ನೇಹಿತನಾಗಿದ್ದ ಸಾಹಿಲ್ ಕಾಫಿ ಕುಡಿಯಲು ಕರೆದ ಕಾರಣ ಆತನೊಂದಿಗೆ ತೆರಳಿದ್ದಾಳೆ. ಕಾಫಿ ಶಾಪ್ ನಲ್ಲಿ ಕಾಫಿ ಕುಡಿದ ನಂತರ ಫ್ಲ್ಯಾಟ್ ಗೆ ಕರೆದುಕೊಂಡು ಹೋದ ಸಾಹಿಲ್ ಮದ್ಯಪಾನ ಮಾಡಿಸಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.
ಮಗಳು ಕಾಣಿಸದ ಕಾರಣ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಭಾನುವಾರ ಸಂಜೆ ಮನೆಗೆ ಬಂದ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.