ಹೈದರಾಬಾದ್: ವ್ಯಕ್ತಿಯೊಬ್ಬ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಸೇತುವೆ ಮೇಲಿಂದ ಗೋದಾವರಿ ನದಿಗೆ ತಳ್ಳಿದ್ದು, ಈ ವೇಳೆ 13 ವರ್ಷದ ಬಾಲಕಿ ಪವಾಡ ರೀತಿಯಲ್ಲಿ ಬದುಕುಳಿದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.
13 ವರ್ಷದ ಕೀರ್ತನಾ ಬದುಕುಳಿದ ಬಾಲಕಿ. ಗುಂಟೂರು ಜಿಲ್ಲೆಯ ರಾವುಲಪಾಲೆಂನಲ್ಲಿ ವ್ಯಕ್ತಿಯೋರ್ವ ಮಹಿಳೆ ಹಾಗೂ ಆಕೆಯ 13 ವರ್ಷದ ಹಾಗೂ ಒಂದುವರೆ ವರ್ಷದ ಮಗುವನ್ನು ಗೋದಾವರಿ ನದಿಗೆ ತಳ್ಳಿದ್ದಾನೆ. ಕೀರ್ತನಾ ಸೇತುವೆಯ ಪೈಪ್ ಲೈನ್ ಹಿಡಿದುಕೊಂಡು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾಳೆ. ಆದರೆ ಆಕೆಯ ತಾಯಿ ಹಾಗೂ ಒಂದುವರೆ ವರ್ಷದ ಪುಟ್ಟ ತಂಗಿ ಆಕೆಯ ಕಣ್ಣೆದುರೇ ನೀರುಪಾಲಾಗಿ ಸಾವನ್ನಪ್ಪಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ ಗುಂಟೂರು ಮೂಲದ ತಾಡೆಪಲ್ಲಿಯ ಸುಹಾಸಿನಿ ಎಂಬುವವರು ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ್ದರು. ಬಳಿಕ ಗುಡಿವಾಳದ ಉಳವ ಸುರೇಶ್ ಎಂಬಾತನ ಜೊತೆ ವಾಸವಾಗಿದ್ದಳು. ಇಬ್ಬರಿಗೂ ಓರ್ವ ಹೆಣ್ಣು ಮಗು ಜನಿಸಿತ್ತು. ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಸುಹಾಸಿನಿ ಹಾಗೂ ಮಕ್ಕಳನ್ನು ಮುಗಿಸಿಬಿಡಬೇಕು ಎಂದು ಸುರೇಶ್ ಪ್ಲಾನ್ ಮಾಡಿದ್ದ. ಅದರಂತೆ ರಾಜಮಹೇಂದ್ರವರಂ ನಲ್ಲಿ ಬಟ್ಟೆ ಕೊಡಿಸುವುದಾಗಿ ಹೇಳಿ ಸುಹಾಸಿನಿ ಹಾಗೂ ಇಬ್ಬರು ಮಕ್ಕಳನ್ನು ಕಾರಲ್ಲಿ ಕರೆದುಕೊಂಡು ಹೋಗಿದ್ದ. ವಾಪಸ್ ಬರುವಾಗ ಮುಂಜಾನೆ ನಾಲ್ಕು ಗಂಟೆಗೆ ಗೋದಾವರಿ ನದಿಯ ಮೇಲಿನ ಸೇತುವೆ ಬಳಿ ಕರೆದೊಯ್ದಿದ್ದಾನೆ. ಸೇತುವೆ ಮೇಲೆ ಸೆಲ್ಫಿ ತೆಗೆದುಕೊಳ್ಳೋಣ ಎಂದು ನಾಟಕವಾಡಿದ್ದಾನೆ. ಸುಹಾಸಿನಿ ಹಾಗೂ ಇಬ್ಬರು ಮಕ್ಕಳನ್ನು ಸೇತುವೆ ಅಂಚಲ್ಲಿ ನಿಲ್ಲಿಸಿದ್ದಾನೆ. ಬಳಿಕ ಮೂವರನ್ನೂ ನದಿಗೆ ತಳ್ಳಿದ್ದಾನೆ.
ಮಹಿಳೆ ಹಾಗೂ ಮಗು ನೀರಿಗೆ ಬಿದ್ದಿದ್ದಾರೆ. ಆದರೆ 13 ವರ್ಷದ ಕೀರ್ತನಾ ಸೇತುವೆಯ ಕೇಬಲ್ ಪೈಪ್ ಹಿಡಿದುಕೊಂಡು ಬಚಾವ್ ಆಗಿದ್ದಾಳೆ. ಮೂವರು ಸಾವನ್ನಪ್ಪಿದ್ದಾರೆ ಎಂದು ಸುರೇಶ್ ಕಾರಿನಲ್ಲಿ ಪರಾರಿಯಾಗಿದ್ದಾನೆ. ಆದರೆ ಪೈಪ್ ಹಿಡಿದುಕೊಂಡು ಬದುಕುಳಿದಿದ್ದ ಕೀರ್ತನಾ ತನ್ನ ಪ್ಯಾಂಟ್ ಜೇಬ್ ನಲ್ಲಿದ್ದ ಮೊಬೈಲ್ ತೆಗೆದು ತುರ್ತು ಕರೆ ಮಾಡಿದ್ದಾಳೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಅರ್ಧಗಂಟೆಗೂ ಹೆಚ್ಚು ಕಾಲ ಬಾಲಕಿ ಪೈಪ್ ಹಿಡಿದು ನೇತಾಡುತ್ತಿದ್ದಳು. ಬಾಲಕಿಯನ್ನು ರಕ್ಷಿಸಲಾಗಿದ್ದು, ಆರೋಪಿ ಸುರೇಶ್ ಗಾಗಿ ಶೋಧ ನಡೆಸಲಾಗಿದೆ.