ಜೀವ ಉಳಿಸುವ ಲಸಿಕೆ ಮಾರಣಾಂತಿಕವಾಗುತ್ತಿದೆ ಎಂಬ ಆತಂಕವೀಗ ಆವರಿಸಿದೆ. ಕರೋನಾ ವೈರಸ್‌ನಿಂದ ರಕ್ಷಣೆ ಪಡೆಯಲು ಬಹುತೇಕ ಎಲ್ಲರೂ ಲಸಿಕೆ ಪಡೆದಿದ್ದಾರೆ. ಆದ್ರೀಗ ಲಸಿಕೆಯ ಡೋಸ್ ಬಗ್ಗೆ ಚರ್ಚೆಗಳು ಶುರುವಾಗಿವೆ. ಕೋವಿಡ್ ಲಸಿಕೆ ತಯಾರಿಸುವ ಬ್ರಿಟಿಷ್ ಫಾರ್ಮಾಸ್ಯುಟಿಕಲ್ ಕಂಪನಿ ಅಸ್ಟ್ರಾಜೆನೆಕಾ, ತನ್ನ ಕೋವಿಡ್ -19 ಲಸಿಕೆ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎಂದು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ. ಜೀವ ಉಳಿಸುವ ಲಸಿಕೆ ಎಂದು ಜನರು ಭಾವಿಸಿದ್ದ ಲಸಿಕೆಯ ಮಾರಕ ಅಡ್ಡ ಪರಿಣಾಮಗಳನ್ನು ಕಂಪನಿಯೇ ಒಪ್ಪಿಕೊಂಡಿದೆ.
ಕೋವಿಡ್ ಲಸಿಕೆಯಿಂದ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ನ ಅಪಾಯ!
ಕೋವಿಡ್ ಲಸಿಕೆ ಕೋವಿಶೀಲ್ಡ್ ಅನ್ನು ತಯಾರಿಸುವ ವಿಶ್ವದ ಪ್ರಮುಖ ಔಷಧೀಯ ಕಂಪನಿ ಅಸ್ಟ್ರಾಜೆನೆಕಾ, ಕರೋನಾ ಲಸಿಕೆ TTS ನಂತಹ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬಹಿರಂಗಪಡಿಸಿದೆ. ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ಪಾರ್ಶ್ವವಾಯು, ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಬ್ರಿಟನ್‌ನ ಪ್ರಮುಖ ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತದೆ. ಕಂಪನಿಯ ಇತಿಹಾಸವು 100 ವರ್ಷಗಳಿಗಿಂತ ಹೆಚ್ಚು ಹಳೆಯದು. ಇದು ವಿಶ್ವದ ಪ್ರಮುಖ ಔಷಧೀಯ ಕಂಪನಿಗಳಲ್ಲೊಂದು. ಭಾರತದಲ್ಲಿ ಈ ಸೂತ್ರದಿಂದ ತಯಾರಿಸಿದ ಕೋವಿಶೀಲ್ಡ್‌ನ 175 ಕೋಟಿ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಭಾರತದಲ್ಲಿ ಆಧಾರ್ ಪೂನಾವಾಲಾ ಅವರ ಸೀರಮ್ ಇನ್‌ಸ್ಟಿಟ್ಯೂಟ್ ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಅನ್ನು ಸಿದ್ಧಪಡಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಸ್ಟ್ರಾಜೆನೆಕಾ ಈ ಲಸಿಕೆಯನ್ನು ಸಿದ್ಧಪಡಿಸಿತ್ತು. ಭಾರತಕ್ಕೆ ಕೋವಿಶೀಲ್ಡ್ ಲಸಿಕೆ ತಯಾರಿಸಲು ಸೀರಮ್ ಇನ್‌ಸ್ಟಿಟ್ಯೂಟ್ ಜನವರಿ 2021ರಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.
ಲಸಿಕೆ ತಯಾರಿಕಾ ಕಂಪನಿಯ ಇತಿಹಾಸ…
ಸ್ವೀಡನ್‌ನ ಅಸ್ಟ್ರಾ ಎಬಿ ಮತ್ತು ಬ್ರಿಟನ್‌ನ ಜೆನೆಕಾ ಪಿಎಲ್‌ಸಿ ವಿಲೀನದಿಂದ ಅಸ್ಟ್ರಾಜೆನೆಕಾ ಹುಟ್ಟಿಕೊಂಡಿದೆ. ಈ ಎರಡು ಕಂಪನಿಗಳ ವಿಲೀನವು 1999 ರಲ್ಲಾಗಿತ್ತು. ಅಸ್ಟ್ರಾ ಎಬಿ ಅನ್ನು 1913 ರಲ್ಲಿ ಸ್ವೀಡನ್‌ನ ವೈದ್ಯರ ಗುಂಪು ಸ್ಥಾಪಿಸಿದೆ. AstraZeneca ಕಳೆದ 25 ವರ್ಷಗಳಲ್ಲಿ ಪ್ರಪಂಚದಾದ್ಯಂತ ಅನೇಕ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಕಂಪನಿಯ ಮಾರುಕಟ್ಟೆ ಕ್ಯಾಪ್ ಮೌಲ್ಯ 234 ಬಿಲಿಯನ್ ಡಾಲರ್. ಇದು ವಿಶ್ವದ 47ನೇ ಮೌಲ್ಯಯುತ ಕಂಪನಿಯಾಗಿದೆ. ರಿಲಯನ್ಸ್ ಈ ಪಟ್ಟಿಯಲ್ಲಿ 45ನೇ ಸ್ಥಾನದಲ್ಲಿದೆ.
ಕೋವಿಶೀಲ್ಡ್‌ನಿಂದಾದ ಗಳಿಕೆ ಎಷ್ಟು?
ಕರೋನಾ ಲಸಿಕೆಯನ್ನು ತಯಾರಿಸುವ ಮೂಲಕ ಅಸ್ಟ್ರಾಜೆನೆಕಾ ಹಣ ಮತ್ತು ಹೆಸರು ಎರಡನ್ನೂ ಗಳಿಸಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಗಾಗಿ ಪರವಾನಗಿಯನ್ನು ತೆಗೆದುಕೊಂಡಿದೆ. 2019-20 ರಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಕಂಪನಿಯ ನಿವ್ವಳ ಆದಾಯ 5926 ಕೋಟಿ ಮತ್ತು ನಿವ್ವಳ ಲಾಭ 2251 ಕೋಟಿ ರೂ.