ರಷ್ಯಾ ಸೈನಿಕರು ಆಕ್ರಮಣ ಮಾಡಿದ ಕಾರಣ ಇಡೀ ಉಕ್ರೇನ್ ಈಗ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಲಕ್ಷಾಂತರ ಜನ ದೇಶ ಬಿಟ್ಟು ತೊರೆದಿದ್ದಾರೆ, ಕೋಟ್ಯಂತರ ಜನ ಭಯದಲ್ಲೇ ಬದುಕುತ್ತಿದ್ದಾರೆ. ಆದರೂ, ಕಂಗೆಡದ ಉಕ್ರೇನ್ ಯುವಕರು ಸೇನೆಗೆ ಸೇರುವ ಮೂಲಕ ರಷ್ಯಾಗೆ ತಿರುಗೇಟು ಸಹ ನೀಡುತ್ತಿದ್ದಾರೆ. ಆ ಮೂಲಕ ದೇಶಪ್ರೇಮ ಮೆರೆಯುತ್ತಿದ್ದಾರೆ. ದೇಶದ ರಕ್ಷ ಣೆಗೆ ಹೆಗಲು ಕೊಟ್ಟು ಶೂರರು ಎನಿಸಿಕೊಳ್ಳುತ್ತಿದ್ದಾರೆ.
ಇದರ ಬೆನ್ನಲ್ಲೇ 98 ವರ್ಷದ ಮಹಿಳೆಯೊಬ್ಬರು ರಷ್ಯಾ ಸೈನಿಕರ ವಿರುದ್ಧ ಹೋರಾಡಲು ನಾನೂ ಸೇನೆಗೆ ಸೇರುತ್ತೇನೆ ಎಂದು ಹೇಳಿರುವುದು ಈಗ ಉಕ್ರೇನ್ ಮಾತ್ರವಲ್ಲ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವೇ ಮಹಿಳೆಯ ಶೌರ್ಯವನ್ನು ಮೆಚ್ಚಿಕೊಂಡು, ಅವರ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.
’98 ವರ್ಷದ ಓಲ್ಹಾ ಟ್ವೆರ್ಡೋಖ್ಲಿ ಬೋವಾ ಎಂಬ ದಿಟ್ಟೆಯು ಎರಡನೇ ಜಾಗತಿಕ ಯುದ್ಧದಲ್ಲಿ ಹೋರಾಟ ನಡೆಸಿದ್ದು, ಈಗ ದೇಶದಲ್ಲಿ ಮತ್ತೊಂದು ಯುದ್ಧವನ್ನು ನೋಡುತ್ತಿದ್ದಾರೆ. ಆದರೂ, ಎದೆಗುಂದದ ಇವರು ಸೇನೆ ಸೇರುತ್ತೇನೆ, ರಷ್ಯಾ ವಿರುದ್ಧ ಹೋರಾಡುತ್ತೇನೆ ಎಂದಿದ್ದಾರೆ. ಆದರೆ, ಇವರಿಗೆ 98 ವರ್ಷ ವಯಸ್ಸಾಗಿರುವ ಕಾರಣ ಸೇನೆಗೆ ಸೇರಿಸಿಕೊಂಡಿಲ್ಲ. ಆದರೇನಂತೆ, ಇಂತಹ ದೇಶಪ್ರೇಮಿಗಳಿಂದಲೇ ಶೀಘ್ರದಲ್ಲಿ ದೇಶವು ಸ್ವತಂತ್ರವಾಗಲಿದೆ’, ಎಂದು ಸಚಿವಾಲಯವು ಟ್ವೀಟ್ ಮಾಡಿದೆ.
ಓಲ್ಹಾ ಅವರ ಅಪ್ರತಿಮ ದೇಶಭಕ್ತಿಯನ್ನು ಜಾಲತಾಣದಲ್ಲಿ ಜನ ಮೆಚ್ಚಿದ್ದಾರೆ. ಶೌರ್ಯದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಉಕ್ರೇನ್ ಸಮಸ್ಯೆಯಿಂದ ಹೊರಗೆ ಬರಲಿ ಹಾಗೂ ಓಲ್ಹಾ ಅವರು ಆರೋಗ್ಯದಿಂದ ದೀರ್ಘಕಾಲ ಬಾಳಲಿ ಎಂದು ಹಾರೈಸಿದ್ದಾರೆ.