ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದ 97 ವರ್ಷದ ಮಹಿಳೆಗೆ 10,505 ಜನರ ಹತ್ಯೆಗೆ ಸಹಾಯ ಮತ್ತು ಐದು ಜನರ ಹತ್ಯೆಗೆ ಯತ್ನಕ್ಕಾಗಿ ಎರಡು ವರ್ಷಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣವು ವಿಶ್ವ ಸಮರ 2ರ ಸಮಯದ್ದಾಗಿದೆ. ಈ ಮೂಲಕ ಇದು ಜರ್ಮನಿಯ ಕೊನೆಯ ನಾಜಿ-ಯುಗದ ಕ್ರಿಮಿನಲ್ ಶಿಕ್ಷೆಯಾಗಿದೆ.
ಇರ್ಮ್‌ಗಾರ್ಡ್ ಫರ್ಚ್ನರ್ ಎಂಬಾಕೆ 1943 ರಿಂದ 1945 ರಲ್ಲಿ ನಾಜಿ ಆಡಳಿತದ ಅಂತ್ಯದವರೆಗೆ ನಾಜಿ-ಆಕ್ರಮಿತ ಪೋಲೆಂಡ್‌ನ ಗ್ಡಾನ್ಸ್ಕ್ ಬಳಿಯ ಸ್ಟಟ್‌ಥಾಫ್ ಶಿಬಿರದಲ್ಲಿ ಸ್ಟೆನೋಗ್ರಾಫರ್ ಮತ್ತು ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು.
ಸುಮಾರು 65,000 ಜನರು ಹಸಿವಿನಿಂದ ಮತ್ತು ಕಾಯಿಲೆಯಿಂದ ಈ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ಅಮೆರಿಕದ ಹತ್ಯಾಕಾಂಡದ ಸ್ಮಾರಕ ವಸ್ತುಸಂಗ್ರಹಾಲಯದ ಪ್ರಕಾರ, ಇವುಗಳಲ್ಲಿ ಯುದ್ಧ ಕೈದಿಗಳು ಮತ್ತು ನಾಜಿಗಳ ನಿರ್ನಾಮ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಯಹೂದಿಗಳು ಸೇರಿದ್ದಾರೆ.
ಕೈದಿಗಳನ್ನು ಗ್ಯಾಸ್ಸಿಂಗ್ ಮೂಲಕ ಕ್ರೂರವಾಗಿ ಕೊಲ್ಲಲಾಗಿತ್ತು. ಇದಕ್ಕೆ ನೆರವು ನೀಡಿರುವ ಆರೋಪ ಫರ್ಚ್ನರ್‌ನ ಮೇಲಿತ್ತು. ಈಗ ಆಕೆ ತಪ್ಪಿತಸ್ಥೆ ಎಂಬುದು ಸಾಬೀತಾಗಿ ಶಿಕ್ಷೆ ವಿಧಿಸಲಾಗಿದೆ.