ಮುಂಬೈ: 2000 ರೂಪಾಯಿ ಮುಖಬೆಲೆಯ ಬ್ಯಾಂಕ್ ನೋಟುಗಳಲ್ಲಿ ಸುಮಾರು 97.69 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಹಿಂಪಡೆದ ನೋಟುಗಳಲ್ಲಿ 8,202 ಕೋಟಿ ರೂಪಾಯಿಗಳು ಮಾತ್ರ ಸಾರ್ವಜನಿಕ ಚಲಾವಣೆಯಲ್ಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸೋಮವಾರ ತಿಳಿಸಿದೆ.
2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ RBI ಮೇ 19, 2023 ರಂದು ಘೋಷಿಸಿತು. ಆ ಸಮಯದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂ. ಆದಾಗ್ಯೂ, ಮಾರ್ಚ್ 29, 2024 ರ ಹೊತ್ತಿಗೆ ಈ ಮೌಲ್ಯವು 8,202 ಕೋಟಿ ರೂ.ಗೆ ಗಣನೀಯವಾಗಿ ಕುಸಿದಿದೆ. ಇದು ಚಲಾವಣೆಯಲ್ಲಿರುವ ಈ ನೋಟುಗಳ ಉಪಸ್ಥಿತಿಯಲ್ಲಿ ಗಣನೀಯ ಇಳಿಕೆಯನ್ನು ಸೂಚಿಸುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ಹೀಗಾಗಿ, ಮೇ 19, 2023 ರಂತೆ ಚಲಾವಣೆಯಲ್ಲಿರುವ 2000 ರೂಪಾಯಿಗಳ ಬ್ಯಾಂಕ್ ನೋಟುಗಳಲ್ಲಿ 97.69 ಪ್ರತಿಶತವು ಹಿಂತಿರುಗಿದೆ ಎಂದು ಹೇಳಲಾಗಿದೆ.
ಜನರು 19 RBI ಕಛೇರಿಗಳಲ್ಲಿ 2000 ರೂಪಾಯಿಗಳ ನೋಟುಗಳನ್ನು ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದು. ಆರಂಭದಲ್ಲಿ 2 ಸಾವಿರ ರೂ ನೋಟುಗಳನ್ನು ಹೊಂದಿರುವ ಸಾರ್ವಜನಿಕ ಮತ್ತು ಖಾಸಗಿ ಘಟಕಗಳು ಸೆಪ್ಟೆಂಬರ್ 30, 2023 ರೊಳಗೆ ಅವುಗಳನ್ನು ಬದಲಾಯಿಸಲು ಅಥವಾ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಲು ಸೂಚಿಸಲಾಯಿತು. ಈ ಗಡುವನ್ನು ನಂತರ ಅಕ್ಟೋಬರ್ 7, 2023 ರವರೆಗೆ ವಿಸ್ತರಿಸಲಾಯಿತು, ನಂತರ ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಮತ್ತು ವಿನಿಮಯ ಸೇವೆಗಳನ್ನು ನಿಲ್ಲಿಸಲಾಯಿತು.
ಅಕ್ಟೋಬರ್ 8, 2023 ರಿಂದ, ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತಪುರಂ, ಗುವಾಹಟಿಯಲ್ಲಿರುವ 19 ಆರ್‌ಬಿಐ ಕಚೇರಿಗಳಲ್ಲಿ ಕರೆನ್ಸಿ ವಿನಿಮಯ ಮಾಡಿಕೊಳ್ಳಲು ಅಥವಾ ಸಮಾನವಾದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಅವಕಾಶ ನೀಡಲಾಗಿದೆ. ನವೆಂಬರ್ 2016 ರಲ್ಲಿ ಅಸ್ತಿತ್ವದಲ್ಲಿದ್ದ 1000 ಮತ್ತು 500 ರೂಪಾಯಿಗಳ ನೋಟುಗಳ ಅಮಾನ್ಯೀಕರಣದ ನಂತರ 2000 ರೂಪಾಯಿ ನೋಟುಗಳನ್ನು ಪರಿಚಯಿಸಲಾಗಿತ್ತು.