ಸ್ಥೂಲಕಾಯತೆ ಮತ್ತು ತೂಕ ಹೆಚ್ಚಾಗುವುದು ನಮ್ಮ ಜೀವನಶೈಲಿಯಲ್ಲಾಗುವ ಲೋಪದೋಷಗಳ ಪರಿಣಾಮ. ಬೆಳಗಿನ ನಡಿಗೆ, ಯೋಗ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳದೇ ಇದ್ದರೆ ಬೊಜ್ಜಿನ ಸಮಸ್ಯೆ ಕಾಡಲಾರಂಭಿಸುತ್ತದೆ. ಅಂಥದ್ರಲ್ಲಿ 97ರ ಹರೆಯದಲ್ಲೂ ಸಂಪೂರ್ಣ ಫಿಟ್ ಆಗಿರೋ ಮಹಿಳೆಯೊಬ್ಬಳಿದ್ದಾಳೆ. ಈಕೆ ನಿಜಕ್ಕೂ ಎಲ್ಲರಿಗೂ ಮಾದರಿ. ದೈಹಿಕವಾಗಿ ಸದೃಢವಾಗಿರುವುದು ಹೇಗೆ ಎಂಬುದಕ್ಕೆ ಈ ಮಹಿಳೆಯೇ ಬೆಸ್ಟ್ ಎಕ್ಸಾಂಪಲ್.
97 ವರ್ಷದ ಎಲ್ಲೆನ್ ಲಾಲನ್ ಅವರನ್ನು ಜನರು ‘ಫಿಟ್‌ನೆಸ್ ಐಕಾನ್’ ಎಂದೇ ಕರೆಯುತ್ತಾರೆ.ಎಲ್ಲೆನ್ ಬೆಳಗ್ಗೆ ವ್ಯಾಯಾಮ ಮತ್ತು ಸಕಾರಾತ್ಮಕ ಮನಸ್ಥಿತಿಯೊಂದಿಗೆ ತನ್ನ ದಿನವನ್ನು ಪ್ರಾರಂಭಿಸುತ್ತಾರೆ. ಈ ನಂಬಿಕೆ ದೈಹಿಕವಾಗಿ ಸಕ್ರಿಯವಾಗಿರಲು ಕಾರಣವಂತೆ. ಈ ಇಳಿ ವಯಸ್ಸಿನಲ್ಲೂ ಪುಸ್ತಕಗಳನ್ನು ಬರೆಯುತ್ತಾರೆ ಮತ್ತು ಸಾಕ್ಷ್ಯಚಿತ್ರವನ್ನು ಮಾಡುತ್ತಾರೆ. ಸಿನೆಮಾಗಳ ಪ್ಲಾನಿಂಗ್‌ನಲ್ಲೂ ಕೆಲಸ ಮಾಡುತ್ತಿದ್ದಾರೆ.
ಎಲೆನ್ ಬೆಳಗ್ಗೆ ಎದ್ದ ತಕ್ಷಣ ಸ್ವಲ್ಪ ಸಮಯ ಶಾಂತವಾಗಿ ಕುಳಿತುಕೊಳ್ಳುತ್ತಾರೆ. ನಂತರ ಹಾಸಿಗೆಯ ಮೇಲೆ ವ್ಯಾಯಾಮ ಮಾಡಲು ಪ್ರಾರಂಭಿಸುತ್ತಾರೆ. ಬಾತ್‌ರೂಮ್‌ನಲ್ಲಿ ಕೂಡ ಪುಷ್ಅಪ್ಸ್ ಮಾಡ್ತಾರೆ. ಟ್ರೆಡ್ ಮಿಲ್‌ನಲ್ಲಿ ಪ್ರತಿದಿನ 20 ನಿಮಿಷ ವಾಕ್ ಮಾಡುವ ಜೊತೆಗೆ ದಿನವಿಡೀ ಕ್ರಿಯಾಶೀಲರಾಗಿರುತ್ತಾರೆ. ಯಾರನ್ನಾದರೂ ಟೀಕಿಸುವುದು ಅಥವಾ ಜಗಳವಾಡುವುದರಲ್ಲಿ ಸಮಯವನ್ನು ವ್ಯರ್ಥ ಮಾಡುವುದಿಲ್ಲ.
ತನ್ನ ಫಿಟ್ನೆಸ್‌ನ ರಹಸ್ಯವೆಂದರೆ ನಂಬಿಕೆ ಎನ್ನುವ ಎಲೆನ್, ಇದರಿಂದ ಮಾನಸಿಕವಾಗಿ ಆರೋಗ್ಯವಾಗಿರುವುದು ಮಾತ್ರವಲ್ಲದೆ ತಮ್ಮ ಸುದೀರ್ಘ ಜೀವನದಲ್ಲಿ ಅನುಭವಿಸಿದ ಗಾಯಗಳನ್ನು ಆತ್ಮವಿಶ್ವಾಸದಿಂದ ಗುಣಪಡಿಸಿದ್ದಾರೆ.ಎಲೆನ್, ಟಿವಿ ಫಿಟ್ನೆಸ್ ಪರ್ಸನಾಲಿಟಿ ಜ್ಯಾಕ್ ಲಾಲನ್ ಅವರ ಪತ್ನಿ. ಜ್ಯಾಕ್ ಅವರನ್ನು ಅಮೆರಿಕದ ಆಧುನಿಕ ಫಿಟ್ನೆಸ್ ಚಳುವಳಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. ಜ್ಯಾಕ್ಗೆ ಎಲೆನ್ ಬೆಂಬಲವಾಗಿ ನಿಂತಿದ್ದರು. ವ್ಯಾಪಾರ ಪಾಲುದಾರಳಾಗಿದ್ದರು. ದೇಹದ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿದರೆ ಮುಂದೊಂದು ದಿನ ಖಂಡಿತವಾಗಿಯೂ ಫಿಟ್ ಆಗಿರಲು ಸಾಧ್ಯ ಅನ್ನೋದು ಎಲೆನ್ ಅನುಭವದ ಮಾತು.