ಪುರಾತನ ಜೀವಿಗಳ ಪುರಾವೆಗಳು, ಪಳೆಯುಳಿಕೆಗಳ ಬಗ್ಗೆ ಪ್ರಾಗ್ಜೀವಶಾಸ್ತ್ರಜ್ಞರು ಅಧ್ಯಯನ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಮ್ಮೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಅವರು ನಮ್ಮ ಜೊತೆ ಹಂಚಿಕೊಳ್ಳುತ್ತಾರೆ. ಅದನ್ನು ತಿಳಿದ ನಮಗಂತೂ ಹೀಗೂ ಇತ್ತಾ (ಸಂಭವಿಸಿತ್ತಾ) ಅಂತಾ ಅಚ್ಚರಿಯಾಗುತ್ತದೆ.
ಇದೀಗ ಆಸ್ಟ್ರೇಲಿಯಾದ ಕೆಲವು ಸಂಶೋಧಕರು ಹೊಸ ಆವಿಷ್ಕಾರವನ್ನು ಮಾಡಿದ್ದಾರೆ. ಮಾತ್ರವಲ್ಲದೆ ಆ ಜೀವಿಯು ತನ್ನ ಕೊನೆಯದಾಗಿ ಏನು ಆಹಾರ ಸೇವಿಸಿತು ಎಂಬುದರ ಕುರಿತಾಗಿ ಕುತೂಹಲಕಾರಿಯಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಹಳ ಹಿಂದೆಯೇ ಲ್ಯಾಂಡ್ ಡೌನ್ ಅಂಡರ್‌ನಲ್ಲಿರುವ ವಿಜ್ಞಾನಿಗಳ ತಂಡವು ಮೊಸಳೆಯ ಪಳೆಯುಳಿಕೆಗಳಿರುವ ಅವಶೇಷಗಳನ್ನು ಕಂಡುಹಿಡಿದಿದೆ. ಕ್ವೀನ್ಸ್‌ಲ್ಯಾಂಡ್‌ನಿಂದ ವಶಪಡಿಸಿಕೊಂಡ ಅವಶೇಷಗಳು 95 ಮಿಲಿಯನ್ ವರ್ಷಗಳಷ್ಟು ಹಳೆಯವು ಎಂದು ನಂಬಲಾಗಿದೆ. ಹೊಸದಾಗಿ ಪತ್ತೆಯಾದ ಪಳೆಯುಳಿಕೆಯ ಅವಶೇಷಗಳನ್ನು ಅಧ್ಯಯನ ಮಾಡುವಾಗ, ಸಂಶೋಧಕರು ಭಾಗಶಃ ಜೀರ್ಣಗೊಂಡ ಚಿಕ್ಕ ಆರ್ನಿಥೋಪಾಡ್ ಡೈನೋಸಾರ್‌ನ ಅಸ್ಥಿಪಂಜರದ ಅವಶೇಷಗಳನ್ನು ಕಂಡುಕೊಂಡಿದ್ದಾರೆ.
ತನ್ನ ಜೀವಿತಾವಧಿಯಲ್ಲಿ 8.5 ಅಡಿ ಉದ್ದದ ಮೊಸಳೆಯು ತನ್ನ ಕೊನೆಯ ಊಟವಾಗಿ ಪುಟ್ಟ ಡೈನೋಸಾರ್ ಅನ್ನು ತಿಂದಿರಬಹುದು ಎಂದು ತಜ್ಞರು ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮೊಸಳೆಯೊಂದು ಪುಟ್ಟ ಡೈನೋಸಾರ್ ಅನ್ನು ಬೇಟೆಯಾಡಿರುವುದು ಇದೇ ಮೊದಲ ಸಾಕ್ಷಿಯಾಗಿದೆ. ಕ್ರಿಟೇಶಿಯಸ್ ವಯಸ್ಸಿನ ಮೊಸಳೆಯ ಕರುಳಿನಲ್ಲಿ ಪುಟ್ಟ ಡೈನೋಸಾರ್‌ನ ಅಸ್ಥಿಪಂಜರದ ಅವಶೇಷ ಕಂಡು ಬಂದಿದ್ದು, ಅತ್ಯಂತ ಅಪರೂಪ ಎಂದು ಸಂಶೋಧಕರು ಹೇಳಿದ್ದಾರೆ. ಯಾಕೆಂದರೆ ಡೈನೋಸಾರ್ ಗಳು ಬೇಟೆಯಾಡುತ್ತಿದ್ದವು ಎಂಬುದಷ್ಟೇ ಪ್ರಪಂಚಕ್ಕೆ ತಿಳಿದಿದ್ದ ಸತ್ಯವಾಗಿತ್ತು.
ಮೊಸಳೆಯ ಕರುಳಿನಲ್ಲಿರುವ ಡೈನೋಸಾರ್ ಪುರಾವೆಗಳು ದೃಢಪಟ್ಟಿದ್ದರೂ, ಆರ್ನಿಥೋಪಾಡ್ ಅನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅದು ಭಾಗಶಃ ಜೀರ್ಣವಾಗಿದೆ.