ವೃದ್ಧಾಪ್ಯವು ದೌರ್ಬಲ್ಯ ಮತ್ತು ಕಾಯಿಲೆಗಳನ್ನು ತರುತ್ತದೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ 93 ವರ್ಷದ ರಿಚರ್ಡ್ ಮೊರ್ಗನ್ ಮಾತ್ರ ಇದಕ್ಕೆ ತದ್ವಿರುದ್ಧ. ನಾಲ್ಕು ಬಾರಿ ರಿಚರ್ಡ್, ಇಂಡೋರ್ ರೋಯಿಂಗ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರ ಹೃದಯದ ಶಕ್ತಿ, ಸ್ನಾಯುಗಳು ಮತ್ತು ಶ್ವಾಸಕೋಶಗಳು 30-40 ವರ್ಷ ವಯಸ್ಸಿನ ಯುವಕರನ್ನು ಮೀರಿಸುವಂತಿವೆ. ಅವರ ದೈಹಿಕ ರಚನೆ ಈಗ ವಿಜ್ಞಾನಿಗಳಿಗೆ ಸಂಶೋಧನೆಯ ವಸ್ತುವಾಗಿದೆ.
ರಿಚರ್ಡ್‌ಗೆ ವಯಸ್ಸು 90 ದಾಟಿದ್ದರೂ ಅವರ ದೈಹಿಕ ಸಾಮರ್ಥ್ಯ ಮಧ್ಯವಯಸ್ಕರಂತಿದೆ. ಬೇಕರಿಯೊಂದನ್ನು ನಡೆಸುತ್ತಿದ್ದ ರಿಚರ್ಡ್, 70 ವರ್ಷ ದಾಟಿದ ಬಳಿಕ ನಿತ್ಯ ವ್ಯಾಯಾಮ ಮಾಡತೊಡಗಿದರು. ಅವರ ಫಿಟ್‌ನೆಸ್ ಜರ್ನಿ ತಡವಾಗಿ ಆರಂಭವಾದರೂ ಅದ್ಭುತವಾಗಿದೆ. ಇಲ್ಲಿಯವರೆಗೆ ಆತ ರೋಯಿಂಗ್ ಯಂತ್ರದಲ್ಲಿ 10 ಬಾರಿ ಜಗತ್ತನ್ನು ಸುತ್ತಿ ನಾಲ್ಕು ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ.
ಸ್ನಾಯು ದುರ್ಬಲಗೊಳ್ಳುವುದು, ವಯಸ್ಸಾದಂತೆ ಎಲ್ಲಾ ಚಟುವಟಿಕೆಗಳು ನಿಧಾನವಾಗುವುದು ನೈಸರ್ಗಿಕವೇ ಅಥವಾ ವ್ಯಾಯಾಮದ ಕೊರತೆಯಿಂದ ಉಂಟಾಗುತ್ತದೆಯೇ ಎಂಬುದು ಕುತೂಹಲದ ಸಂಗತಿ. ಕೆಲವರು ವೃದ್ಧಾಪ್ಯದಲ್ಲೂ ಗಟ್ಟಿಮುಟ್ಟಾಗಿ ಇರುತ್ತಾರೆ. ಇನ್ನು ಕೆಲವರು ಮಧ್ಯವಯಸ್ಸಿನಲ್ಲೇ ವೃದ್ಧರಂತಾಗಿಬಿಡುತ್ತಾರೆ.
ರಿಚರ್ಡ್ ಮೋರ್ಗನ್‌ರ ಮೊಮ್ಮಗನೇ ಈ ಬಗ್ಗೆ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ರಿಚರ್ಡ್ 2022ರಲ್ಲಿ 90-94 ವಯಸ್ಸಿನವರ ಗುಂಪಿನಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ವಿಶೇಷವೆಂದರೆ ರಿಚರ್ಡ್ 73 ವರ್ಷಕ್ಕಿಂತ ಮೊದಲು ಯಾವುದೇ ಕ್ರೀಡೆ ಅಥವಾ ವ್ಯಾಯಾಮವನ್ನು ಪ್ರಾರಂಭಿಸಲಿಲ್ಲ. ನಿವೃತ್ತಿಯ ನಂತರ ಮೊಮ್ಮಗನೊಂದಿಗೆ ರೋಯಿಂಗ್ ಅಭ್ಯಾಸಕ್ಕೆ ತೆರಳಿದ್ದರು. ಅಲ್ಲಿಂದ ಅವರ ಜರ್ನಿ ಪ್ರಾರಂಭವಾಯಿತು.
92 ನೇ ವಯಸ್ಸಿನಲ್ಲಿ ಸಂಶೋಧಕರು ಅವರನ್ನು ಐರ್ಲೆಂಡ್‌ನ ಲಿಮೆರಿಕ್ ವಿಶ್ವವಿದ್ಯಾಲಯದ ಶರೀರವಿಜ್ಞಾನ ಪ್ರಯೋಗಾಲಯಕ್ಕೆ ಕರೆದರು. ಅವರ ಎತ್ತರ, ತೂಕ, ದೇಹದ ಪ್ರಮಾಣವನ್ನು ಅಳೆಯಲಾಯಿತು ಮತ್ತು ಅವರ ಆಹಾರದ ಬಗ್ಗೆ ವಿವರವಾದ ಮಾಹಿತಿಯನ್ನು ಸಹ ತೆಗೆದುಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಅವರ ಚಯಾಪಚಯ, ಹೃದಯ ಮತ್ತು ಶ್ವಾಸಕೋಶದ ಕಾರ್ಯನಿರ್ವಹಣೆಯನ್ನು ಪರೀಕ್ಷಿಸಲಾಯಿತು. ನಂತರ ಅವರನ್ನು ರೋಯಿಂಗ್ ಮೆಷಿನ್‌ನಲ್ಲಿ 2,000 ಮೀಟರ್ ಓಡುವಂತೆ ಸೂಚಿಸಲಾಯ್ತು. ಈ ಸಂದರ್ಭದಲ್ಲಿ ಅವರ ಹೃದಯ ಬಡಿತ, ಸ್ನಾಯುಗಳು ಮತ್ತು ಶ್ವಾಸಕೋಶಗಳನ್ನು ಅಧ್ಯಯನ ಮಾಡಲಾಗಿದೆ.
ರಿಚರ್ಡ್ ಅವರ ದೇಹವು 80 ಪ್ರತಿಶತ ಸ್ನಾಯುಗಳು ಮತ್ತು ಕೇವಲ 15 ಪ್ರತಿಶತ ಕೊಬ್ಬಿನಿಂದ ಮಾಡಲ್ಪಟ್ಟಿದೆ. ಹಾಗಾಗಿ ಅವರಿಗೆ ವಯಸ್ಸೇ ಆಗುತ್ತಿಲ್ಲ. ವೃದ್ಧಾಪ್ಯದಲ್ಲಿಯೂ ನಿಯಮಿತ ವ್ಯಾಯಾಮದಿಂದ ಹೃದಯ, ಸ್ನಾಯುಗಳು ಮತ್ತು ಶ್ವಾಸಕೋಶಗಳನ್ನು ಬಲಪಡಿಸಬಹುದು, ಚಿಕ್ಕವರಂತೆ ಫಿಟ್ ಆಗಿರಲು ಸಾಧ್ಯ ಎಂಬುದು ಇದರಿಂದ ಖಚಿತವಾಗಿದೆ.