ಬೆಂಗಳೂರು: ರಾಜ್ಯದಲ್ಲಿ 90 ಸಾವಿರ ನಕಲಿ ಕಾರ್ಮಿಕರ ಕಾರ್ಡ್ ಪತ್ತೆಯಾಗಿದೆ. ಬೀದರ್ ನಲ್ಲಿ ಬರೋಬ್ಬರಿ 26,545 ಕಾರ್ಡ್ ಗಳು ಪತ್ತೆಯಾಗಿದ್ದು, ಅನರ್ಹ ನೋಂದಣಿ ಪತ್ತೆ ಮಾಡಿ ರದ್ದು ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಕಾರ್ಡ್ ಗಳನ್ನು ನೀಡಲಾಗುತ್ತಿದ್ದು, ಸೌಲಭ್ಯ ಪಡೆಯಲು ಅನರ್ಹರು ಕೂಡ ಕಾರ್ಡ್ ಪಡೆದುಕೊಂಡಿದ್ದಾರೆ. ಸರ್ಕಾರ 3 ವರ್ಷದಿಂದ ನೋಂದಣಿ ಮಾಡಿಸಿರುವ 32,77,399 ಕಾರ್ಮಿಕರ ಕಾರ್ಡ್ ಗಳಲ್ಲಿ 90,091 ಕಾರ್ಡ್ ಗಳು ನಕಲಿಯಾಗಿದ್ದು, ಅವುಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಕಾರ್ಮಿಕರಲ್ಲದವರು ಕೂಡ ಕಾರ್ಡ್ ಪಡೆದುಕೊಂಡಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕರ್ನಾಟಕ ನಿಯಮಕ್ಕೆ ತಿದ್ದುಪಡಿ ತಂದಿದ್ದು, ನಿಯಮದ ಅನ್ವಯ ಅರ್ಹತಾ ಮಾನದಂಡ ಪೂರೈಸದ ಕಾರ್ಮಿಕರ ನೋಂದಣಿ ರದ್ದುಪಡಿಸಲು ನೋಂದಣಿ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಬೀದರ್ ನಲ್ಲಿ 26545, ಹುಬ್ಬಳ್ಳಿ ಉಪ ವಿಭಾಗ 1ರಲ್ಲಿ 17,119, ಬಾಗಲಕೋಟೆ, ಚಿತ್ರದುರ್ಗ, ಶಿವಮೊಗ್ಗ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಕಲಿ ಕಾರ್ಮಿಕರ ಕಾರ್ಡ್ ಪಡೆಯಲಾಗಿದೆ. ಪರಿಶೀಲನೆ ನಡೆಸಿ ಕಾರ್ಡ್ ರದ್ದುಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೌಲಭ್ಯ ಪಡೆಯಲು ಯತ್ನಿಸಿದ ಅನರ್ಹರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಹೇಳಲಾಗಿದೆ.