ಎಸ್.ಪಿ.ಬಾಲಸುಬ್ರಮಣ್ಯಂ ಭಾರತೀಯ ಸಂಗೀತ ಲೋಕದ ಅನರ್ಘ್ಯ ರತ್ನ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ‘ಅನಸ್ವರಂ’ ಚಿತ್ರದ ‘ತಾರಾಪಧಂ’ ಹಾಡು, ತಮಿಳು ಸಿನಿಮಾ ‘ಡ್ಯುಯೆಟ್’ನ ‘ಅಂಜಲಿ ಅಂಜಲಿ ಪುಷ್ಪಾಂಜಲಿ’, ತೆಲುಗು ಸಿನಿಮಾ ‘ಗೀತಾಂಜಲಿ’ಯ ‘ಓ ಪ್ರಿಯಾ ಪ್ರಿಯಾ’ ಎಂಬ ರೊಮ್ಯಾಂಟಿಕ್ ಗೀತೆ ಹೀಗೆ ಹೇಳುತ್ತ ಹೋದರೆ ಲೆಕ್ಕವೇ ಇಲ್ಲದಷ್ಟು ಬಹು ಸುಮಧುರ ಹಾಡುಗಳನ್ನು ಎಸ್‌ಪಿಬಿ ಕೇಳುಗರಿಗೆ ನೀಡಿದ್ದಾರೆ.
ಬಾಲಸುಬ್ರಮಣ್ಯಂ ಅವರೊಂದಿಗೆ ಅನೇಕ ಡ್ಯುಯೆಟ್ ಹಾಡುಗಳಿಗೆ ಧ್ವನಿಯಾಗಿರುವ ಗಾಯಕಿ ಕೆ.ಎಸ್. ಚಿತ್ರಾ ಅವರೊಂದಿಗಿನ ನೆನಪುಗಳನ್ನು ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದರು. ಎಸ್‌ಪಿಬಿ, ಜೀವನದಲ್ಲಿ ತಾನು ಕಂಡ ಅತ್ಯಂತ ಸರಳ ವ್ಯಕ್ತಿ ಎಂದವರು ಬಣ್ಣಿಸಿದ್ದಾರೆ. ಮಲಯಾಳಂ ಹಾಡುಗಳನ್ನು ಹಾಡುವಾಗ ಉಚ್ಚಾರಣೆಗಾಗಿ ಎಸ್‌ಪಿಬಿ, ಚಿತ್ರಾ ಸಹಾಯವನ್ನು ಕೇಳುತ್ತಿದ್ದರಂತೆ. ತೆಲುಗು ಹಾಡುಗಳ ವಿಷಯದಲ್ಲಿ ಚಿತ್ರಾ ಅವರಿಗೆ ಬಾಲು ನೆರವಾಗುತ್ತಿದ್ದರು.
ಕೇರಳೀಯರಲ್ಲದ ಕಾರಣ ಮತ್ತು ಮಲಯಾಳಂನ ಕೆಲವು ಅಕ್ಷರಗಳ ಉಚ್ಛಾರಣೆಯನ್ನು ಅವರು ಖಚಿತಪಡಿಸಿಕೊಳ್ಳುತ್ತಿದ್ದರು. ಕನಿಷ್ಠ 90 ವರ್ಷಗಳಾದರೂ ಬದುಕಬೇಕು ಎಂಬುದು ಅವರ ಆಸೆಯಾಗಿತ್ತು. ಆದ್ರೆ ಆ ದುರ್ವಿಧಿಗೇ ಇದು ಇಷ್ಟವಿರಲಿಲ್ಲ. ಪ್ರತಿ ಹಾಡನ್ನು ಇಷ್ಟಪಟ್ಟು, ಹೃದಯಾಂತರಾಳದಿಂದ ಹಾಡುತ್ತಿದ್ದ ಅದ್ಭುತ ಗಾಯಕ ಎಸ್‌ಪಿಬಿ. ಕೊರೊನಾ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಅವರು ಹಾಡೊಂದನ್ನು ಸಂಯೋಜಿಸಿದ್ದರು.
ಆದ್ರೆ ಅದೇ ಕೋವಿಡ್ ಮಹಾಮಾರಿ ಎಸ್‌ಪಿಬಿ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ. ಎಸ್‌ಪಿಬಿ ನಮ್ಮನ್ನು ಅಗಲಿ ಎರಡು ವರ್ಷಗಳೇ ಕಳೆದಿದ್ದರು ಅವರ ನೆನಪುಗಳು, ಅವರ ಮಧುರ ಕಂಠದಲ್ಲಿ ಹೊಮ್ಮಿದ ಗೀತೆಗಳು ಮಾತ್ರ ಎಂದೆಂದಿಗೂ ಅಜರಾಮರ.