ಅದು 10 ವರ್ಷಗಳ ಹಿಂದಿನ ಮಾತು, ಮುಂಬೈ ಮಹಾನಗರಿಯ ಅಂಧೇರಿಯಲ್ಲಿ 7 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಆದರೆ ಮುಂಬೈ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಧೋಂಡು ಭೋಸ್ಲೆ ಅವರ ಅವಿರತ ಶ್ರಮದ ಫಲವಾಗಿ 2022 ರ ಆಗಸ್ಟ್ 4 ರಂದು ತನ್ನ ಕುಟುಂಬವನ್ನು ಕೂಡಿಕೊಂಡಿದ್ದಾಳೆ.
ಸರಿಯಾಗಿ 9 ವರ್ಷ 7 ತಿಂಗಳು ನಾಪತ್ತೆಯಾಗಿದ್ದ ಹುಡುಗಿ ಪತ್ತೆಯಾಗುವ ವೇಳೆ ಮನೆಯಿಂದ ಕೇವಲ 500 ಮೀಟರ್ ದೂರದಲ್ಲೇ ಪತ್ತೆಯಾಗಿದ್ದಾಳೆ. ಇದಕ್ಕಿಂತ ಅಚ್ಚರಿಯ ವಿಚಾರ ಏನಂದರೆ, 7 ವರ್ಷದವಳಾಗಿದ್ದಾಗ ನಾಪತ್ತೆಯಾಗಿದ್ದ ಹುಡುಗಿ ಸಿಕ್ಕಾಗ ಮನೆಯಿಂದ ಕೇವಲ 500 ಮೀಟರ್ ಅಷ್ಟೆ ದೂರ ಇದ್ದಳು.
ಈಗ 16 ವರ್ಷದ ಹುಡುಗಿಯಾಗಿರುವ ಈಕೆ ತನ್ನ ಕುಟುಂಬವನ್ನು ಕೂಡಿಕೊಂಡಿದ್ದಾಳೆ. ಈ ಕಥೆಯು 9 ವರ್ಷಗಳ ಕಾಲ ತನ್ನ ಗುರುತಿನೊಂದಿಗೆ ಹೋರಾಡಿದ ಹುಡುಗಿಯ ಕುರಿತಾಗಿದೆ. ಮಗುವಿನ ಆಸೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ವ್ಯಕ್ತಿಯೊಬ್ಬ ಈಕೆಯ ಅಪಹರಣ ಮಾಡಿದ್ದ, ಆ ವ್ಯಕ್ತಿ ತನ್ನ ಸ್ವಂತ ಮಗುವನ್ನು ಹೊಂದಿದ್ದ ಹೊರತಾಗಿಯೂ ಈ ಬಾಲಕಿಯನ್ನ ಮನೆಗೆಲಸದವಳಾಗಿ ಇರಿಸಿಕೊಂಡಿದ್ದ. ಆರೋಪಿಯ ಪತ್ನಿ ಕೂಡ ಬಾಲಕಿಗೆ ಥಳಿಸುತ್ತಿದ್ದಳು. ಒಮ್ಮೆ ಕುಡಿದ ಅಮಲಿನಲ್ಲಿ ಹುಡುಗಿಗೆ ನೀನು ನನ್ನ ಮಗುವಲ್ಲ ನಿನ್ನ ಬೆಳೆಸಿದ್ದಷ್ಟೆ ನಾನು ಅಂತ ಹೇಳಿದ್ಧಾನೆ.
ಪೊಲೀಸ್ ತನಿಖೆ ತೀವ್ರವಾಗಿದ್ದಲ್ಲದೆ, ಮಾಧ್ಯಮಗಳು ಕೂಡ ಈ ಕುರಿತಾಗಿ ತೀವ್ರವಾಗಿ ವರದಿಗಾರಿಕೆ ಆರಂಭ ಮಾಡಿದ್ದವು. ಸ್ಥಳೀಯ ಪೊಲೀಸರು ಕೂಡ ಈ ಬಗ್ಗೆ ಅಭಿಯಾನ ಆರಂಭಿಸಿದ್ದರು. ಆರೋಪಿ ಡಿಸೋಜಾ ಇದರಿಂದ ಹೆದರಿದ್ದ. ಹಾಗೇನಾದರೂ, ಮಗು ಸಿಕ್ಕಲ್ಲಿ ತಾನು ಹಾಗೂ ಪತ್ನಿ ಇಬ್ಬರೂ ಜೈಲಿಗೆ ಸೇರಬಹುದು ಎನ್ನುವ ಕಾರಣಕ್ಕೆ, ಪೂಜಾ ಗೌಡಳನ್ನು ಕರ್ನಾಟಕದ ರಾಯಚೂರಿನಲ್ಲಿರುವ ಹಾಸ್ಟೆಲ್ಗೆ ಕಳಿಸಿದ್ದ.
2016ರಲ್ಲಿ ಜೋಸೆಫ್ ಡಿಸೋಜಾ ಹಾಗು ಸೋನಿಗೆ ಸ್ವಂತ ಮಗುವಾಗಿತ್ತು. ಈ ವೇಳೆ ಜೋಸೆಫ್, ರಾಯಚೂರಿನಲ್ಲಿ ಕಲಿಯುತ್ತಿದ್ದ ಪೂಜಾಳನ್ನು ಮುಂಬೈಗೆ ವಾಪಸ್ ಕರೆಸಿದ್ದ. ಆದರೆ, ಈ ವೇಳೆಗಾಗಲೇ ಇಬ್ಬರು ಮಕ್ಕಳನ್ನು ಸಾಕುವುದು ಕುಟುಂಬಕ್ಕೆ ಕಷ್ಟವಾಗಿತ್ತು. ಈ ವೇಳೆ ಬೇಬಿ ಸಿಟ್ಟಿಂಗ್ ಆರಂಭಿಸಿ, ಅದನ್ನು ನೋಡಿಕೊಳ್ಳಲು ಪೂಜಾಳನ್ನು ನೇಮಿಸಿದ್ದ. ಈ ಹಂತದಲ್ಲಿ ಮನೆಯನ್ನು ಕೂಡ ಬದಲು ಮಾಡಿದ್ದ ಜೋಸೆಫ್ ಡಿಸೋಜಾ, ಅಂಧೇರಿ ಪೂರ್ವದ ಗಿಲ್ಬರ್ಟ್ ಹಿಲ್ ಏರಿಯಾದಲ್ಲಿ ಮನೆ ಮಾಡಿದ. ಅಚ್ಚರಿ ಎಂದರೆ, ಪೂಜಾರ ತಂದೆ-ತಾಯಿ ಕೂಡ ಇದೇ ಏರಿಯಾದಲ್ಲಿ ವಾಸವಿದ್ದರು.