
ಉತ್ತರಪ್ರದೇಶನದ ವಾರಾಣಸಿಯ 9 ವರ್ಷದ ಬಾಲಕ ರಣವೀರ್ ಭಾರ್ತಿಗೆ ತಾನು ಐಪಿಎಸ್ ಆಗಬೇಕೆಂಬ ಕನಸಿದೆ. ಆದರೆ ಆತನ ಕನಸನ್ನ ಬ್ರೇನ್ ಟ್ಯೂಮರ್ ಕಾಯಿಲೆ ಕೊಂದು ಹಾಕಿದೆ. ಹೀಗಾಗಿ ಆತನ ಕನಸನ್ನು ವಾರಣಾಸಿ ವಲಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿಯೂಷ್ ಮೊರ್ಡಿಯಾ ನನಸು ಮಾಡಿದ್ದಾರೆ.
ADG ವಲಯ ವಾರಣಾಸಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಣವೀರ್ ಭಾರ್ತಿಯ ವೀಡಿಯೊವನ್ನು ಹಂಚಿಕೊಂಡಿದ್ದು, “9 ವರ್ಷದ ರಣವೀರ್ ಭಾರ್ತಿ ವಾರಣಾಸಿಯ ಮಹಾಮಾನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ ರಣವೀರ್ ಐಪಿಎಸ್ ಅಧಿಕಾರಿಯಾಗಬೇಕೆಂದು ತನ್ನ ಆಸೆಯನ್ನು ವ್ಯಕ್ತಪಡಿಸಿದನು. ಆದ್ದರಿಂದ ಮಗುವಿನ ಆಸೆಯನ್ನು ಕಚೇರಿಯಲ್ಲಿ ಪೂರೈಸಲಾಯಿತು” ಎಂದು ತಿಳಿಸಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕ ರಣವೀರ್ ಭಾರ್ತಿ ಖಾಕಿ ಸಮವಸ್ತ್ರ ಧರಿಸಿ ಕ್ಯಾಬಿನ್‌ನಲ್ಲಿ ಕುಳಿತು ಅಧಿಕಾರಿಗಳನ್ನು ಭೇಟಿಯಾಗಿ ಹಸ್ತಲಾಘವ ಮಾಡುತ್ತಿರುವುದು ಕಂಡುಬಂದಿದೆ.
ಬಾಲಕನ ಆಸೆಯನ್ನು ಈಡೇರಿಸಿದ ಪೊಲೀಸರ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ಉತ್ತಮ ಚಿಂತನೆಯ ಉಪಕ್ರಮ ಎಂದು ಬಣ್ಣಿಸಿ ಪೊಲೀಸ್ ಇಲಾಖೆಗೆ ಧನ್ಯವಾದ ಹೇಳಿದ್ದಾರೆ.