ಓದುವಂತೆ ತಂದೆ ಬುದ್ಧಿವಾದ ಹೇಳಿದ್ದಕ್ಕೆ 9 ವರ್ಷದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ದುರಂತ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ಮೃತ ಬಾಲಕಿ ತನ್ನ ರೀಲ್ಸ್ ಮೂಲಕ ʼರೀಲ್ಸ್ ಕ್ವೀನ್ʼ ಎಂಬ ಖ್ಯಾತಿ ಗಳಿಸಿದ್ದಳು.
ಪ್ರತೀಕ್ಷಾ ಎಂದು ಗುರುತಿಸಲಾದ 4ನೇ ತರಗತಿಯ ಬಾಲಕಿ ಕಳೆದ ಆರು ತಿಂಗಳಲ್ಲಿ ಸುಮಾರು 70 ರೀಲ್‌ಗಳನ್ನು ಮಾಡಿದ್ದಳು. ಅವಳನ್ನು ನೆರೆಹೊರೆಯವರು ‘ರೀಲ್ಸ್ ಕ್ವೀನ್’ ಎಂದು ಕರೆಯುತ್ತಿದ್ದರು.
ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಪ್ರತೀಕ್ಷಾ ತನ್ನ ಅಜ್ಜಿಯ ಮನೆಯ ಮುಂದೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಳು. ಆಕೆಯ ಪೋಷಕರಾದ ಕೃಷ್ಣಮೂರ್ತಿ ಮತ್ತು ಕರ್ಪಗಂ ಅಲ್ಲಿಗೆ ಬಂದು ರಾತ್ರಿವರೆಗೂ ಆಟವಾಡುತ್ತಿದ್ದುದ್ದಕ್ಕೆ ಆಕೆಯನ್ನ ಗದರಿ ಮನೆಗೆ ಹೋಗಿ ಓದಿಕೊಳ್ಳುವಂತೆ ಹೇಳಿದ್ದಾರೆ. ನಂತರ ಪೋಷಕರು ಹುಡುಗಿಗೆ ಮನೆಯ ಕೀಲಿ ನೀಡಿ ಮನೆಗೆ ಅಗತ್ಯವಾದ ಕೆಲವು ವಸ್ತುಗಳನ್ನು ಖರೀದಿಸಲು ಹೋಗಿದ್ದರು.
ಅವರು ಹಿಂದಿರುಗಿದ ನಂತರ ಮನೆ ಬಾಗಿಲು ಒಳಗಿನಿಂದ ಮುಚ್ಚಿರುವುದನ್ನು ನೋಡಿ ಪದೇ ಪದೇ ಬಾಗಿಲು ತಟ್ಟಿದರೂ ಪ್ರತೀಕ್ಷಾ ಪ್ರತಿಕ್ರಿಯಿಸಲಿಲ್ಲ.
ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಪ್ರತೀಕ್ಷಾ ಕಿಟಕಿಯ ಗ್ರಿಲ್‌ನಲ್ಲಿ ಕುತ್ತಿಗೆಗೆ ಟವೆಲ್‌ನಿಂದ ನೇಣುಹಾಕಿಕೊಂಡು ನೇತಾಡುತ್ತಿರುವುದನ್ನ ಗಮನಿಸಿದರು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾದ್ರೂ ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ತಿರುವಳ್ಳೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಪೊಲೀಸಲು ಸಾಮಾಜಿಕ ಮಾಧ್ಯಮಗಳನ್ನು ದೂರಿದ್ದು ಇಂಟರ್ನೆಟ್‌ಗೆ ಅನಿಯಂತ್ರಿತ ಪ್ರವೇಶವು ಯುವ ಮನಸ್ಸುಗಳನ್ನು ಎಲ್ಲಾ ರೀತಿಯ ಪ್ರಭಾವಗಳಿಗೆ ಒಡ್ಡುತ್ತದೆ ಎಂದು ಹೇಳಿದ್ದಾರೆ.