ಕೆಲವೊಂದು ಶಸ್ತ್ರಚಿಕಿತ್ಸೆಗಳು ಜೀವಕ್ಕೆ ಅಪಾಯ ತಂದೊಡ್ಡಬಹುದು. ಆದರೂ ಸಹ ಬಾಂದ್ರಾದಲ್ಲಿ ಕಳೆದ 7 ವರ್ಷಗಳಲ್ಲಿ 50 ಮಂದಿಯಿರುವ ಈ ಅವಿಭಕ್ತ ಕುಟುಂಬದಲ್ಲಿ 9 ಸದಸ್ಯರು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಟಾರ್ಡಿಯೋದ ಭಾಟಿಯಾ ಆಸ್ಪತ್ರೆಯಲ್ಲಿ ಮೇ 30ರಂದು ತೂಕ ಇಳಿಸುವ ಶಸ್ತ್ರಚಿಕಿತ್ಸೆಗೆ ಒಳಗಾದ 19 ವರ್ಷದ ವಿದ್ಯಾರ್ಥಿ 120 ಕೆಜಿ ತೂಕವನ್ನು ಹೊಂದಿದ್ದಾರೆ. ಈಗ ಆಕೆ 101 ಕೆಜಿ ತೂಕವನ್ನು ಹೊಂದಿದ್ದಾಳೆ ಎನ್ನಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಈಕೆ ಇನ್ನಷ್ಟು ತೂಕ ನಷ್ಟ ಮಾಡಿಕೊಳ್ಳುತ್ತಾಳೆ ಎಂದು ವಿದ್ಯಾರ್ಥಿನಿಯ ತಾಯಿ ಹೇಳಿದ್ದಾರೆ. ಆದರೆ ತಮ್ಮ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸಲು ಈ ಕುಟುಂಬ ಒಪ್ಪಿಗೆ ನೀಡಲಿಲ್ಲ.
43 ವರ್ಷದ ಈ ತಾಯಿ ಕುಟುಂಬದಲ್ಲಿ ತೂಕ ಇಳಿಸುವಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಎರಡನೇ ಸದಸ್ಯರಾಗಿದ್ದಾರೆ. ನನ್ನ ಪತಿಯ ಸೋದರಳಿಯ 20ರ ಪ್ರಾಯದಲ್ಲಿ 200 ಕೆಜಿ ತೂಕ ಹೊಂದಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರು 30 ಕೆಜಿ ಕಳೆದುಕೊಂಡರು. ಇದಾದ ಬಳಿಕ ನನಗೆ ನಾನೂ ಈ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದೆನಿಸಲು ಆರಂಭಿಸಿತು ಎಂದಿದ್ದಾರೆ.
ಈ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯ ಡಾ, ಸಂಜಯ್ ಬೊರುಡೆ ಈ ವಿಚಾರವಾಗಿ ಮಾತನಾಡಿದ್ದು ಕಳೆದ 7 ವರ್ಷಗಳಲ್ಲಿ 13 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಎಂದಿದ್ದಾರೆ. ಅವಿಭಕ್ತ ಕುಟುಂಬದಿಂದ 9 ಮಂದಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೆ. ಇವರ ದೂರದ ಸಂಬಂಧಿಗಳ ಪೈಕಿ ನಾಲ್ವರು ಇವರಿಂದ ಸ್ಪೂರ್ತಿ ಪಡೆದು ನನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹೋಗಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರ ಪೈಕಿ ಕಿರಿಯರು ಕೇವಲ 13 ವರ್ಷ ಪ್ರಾಯದವರಾಗಿದ್ದರೆ ಹಿರಿಯರು 60 ವರ್ಷ ಪ್ರಾಯದವರು ಎಂದು ಮಾಹಿತಿ ನೀಡಿದ್ದಾರೆ .