ಮುಂಬೈ: ಒಂದೇ ಕುಟುಂಬದ 9 ಜನರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ಮನೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮುಂಬೈನಿಂದ ಸುಮಾರು 350 ಕೀ.ಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮೆಹಸಾಲ್ ಗ್ರಾಮದ ಮನೆಯೊಂದರಲ್ಲಿ ವೈದ್ಯನ ಕುಟುಂಬದ 9 ಜನರ ಮೃತದೇಹ ಪತ್ತೆಯಾಗಿದ್ದು, ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಮೃತರನ್ನು ವೈದ್ಯರಾಗಿದ್ದ ಪೋಪಟ್ ಯಲ್ಲಪ್ಪ ವನ್ಮೋರೆ (52), ಸಂಗೀತಾ ಪೋಪಟ್ ವನ್ಮೋರೆ (48), ಅರ್ಚನಾ ಪೋಪಟ್ ವನ್ಮೋರೆ (30), ಶುಭಂ ಪೋಪಟ್ ವನ್ಮೋರೆ (28), ಮಾಣಿಕ್ ಯಲ್ಲಪ್ಪ ವನ್ಮೋರೆ (49), ರೇಖಾ ಮಾಣಿಕ್ ವನ್ಮೋರೆ (45) ಆದಿತ್ಯ ಮಾಣಿಕ್ ವನ್ಮೋರೆ (15), ಅನಿತಾ ಮಾಣಿಕ್ ವನ್ಮೋರೆ (28) ಮತ್ತು ಅಕ್ಕತೈ ವನ್ಮೋರೆ (72) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಮೂವರ ಮೃತದೇಹ ಒಂದೆಡೆ ಪತ್ತೆಯಾಗಿದ್ದು, ಇನ್ನು 6 ಜನರ ಮೃತದೇಹ ಚಲ್ಲಾಪಿಲ್ಲಿಯಾಗಿದ್ದವು. ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದ್ದು, ಸಾಮೂಹಿಕ ಆತ್ಮಹತ್ಯೆಗೆ ಕಾರಣವಾದರೂ ಏನು ಎಂಬುದೇ ನಿಗೂಢ ಪ್ರಶ್ನೆಯಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.