ಕೌಲಾಲಂಪುರ್: ಶುಕ್ರವಾರ ಮುಂಜಾನೆ ಮಲೇಷ್ಯಾದಲ್ಲಿ ಕ್ಯಾಂಪ್ ಸೈಟ್ ನಲ್ಲಿ ಭೂಕುಸಿತ ಸಂಭವಿಸಿ 5 ವರ್ಷದ ಮಗು ಸೇರಿದಂತೆ ಕನಿಷ್ಠ 9 ಜನ ಸಾವನ್ನಪ್ಪಿದ್ದಾರೆ. ಸುಮಾರು 25 ಮಂದಿ ಕಾಣೆಯಾಗಿದ್ದಾರೆ. ರಕ್ಷಣಾ ಸಿಬ್ಬಂದಿ ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಕೌಲಾಲಂಪುರ್‌ನ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಸ್ಥಳೀಯ ಸಮಯ ಸುಮಾರು 3 ಗಂಟೆಗೆ ಭೂಕುಸಿತ ಸಂಭವಿಸಿದೆ. ರಾಜ್ಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ಹೇಳಿಕೆಯ ಪ್ರಕಾರ, ರಸ್ತೆ ಬದಿಯಲ್ಲಿ ಕ್ಯಾಂಪಿಂಗ್ ಸೌಲಭ್ಯಗಳನ್ನು ಒದಗಿಸುವ ಫಾರ್ಮ್‌ಹೌಸ್ ಭೂಕುಸಿತದಿಂದ ನಾಶವಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಸಾಮಾಜಿಕ ಮಾಧ್ಯಮದ ಸಂದೇಶದ ಪ್ರಕಾರ, ಭೂಕುಸಿತದಲ್ಲಿ 90 ಕ್ಕೂ ಹೆಚ್ಚು ಜನರು ಸಿಕ್ಕಿಬಿದ್ದಿದ್ದಾರೆ. 60 ಜನರು ಸುರಕ್ಷಿತವಾಗಿದ್ದಾರೆ, 25 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಇದಲ್ಲದೆ, 9 ಮಂದಿ ಮೃತಪಟ್ಟು, 7 ಜನ ಗಾಯಗೊಂಡಿದ್ದಾರೆ.