ಕೊಲ್ಕತ್ತಾದಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಕೊಲ್ಕತ್ತಾದ ಸ್ಟಾಂಡ್ ರಸ್ತೆಯ ಈಸ್ಟರ್ನ್ ರೈಲ್ವೇ ಕಚೇರಿಯ 13 ನೇ ಮಹಡಿಯಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿದೆ.
ಬೆಂಕಿ ನಂದಿಸುವ ವೇಳೆ ನಾಲ್ವರು ಅಗ್ನಿಶಾಮಕದಳದ ಸಿಬ್ಬಂದಿ, ಓರ್ವ ರೈಲ್ವೆ ಸಂರಕ್ಷಣಾ ಪಡೆ ಸಿಬ್ಬಂದಿ, ಕೊಲ್ಕತ್ತಾ ಪೊಲೀಸ್ ಸಹಾಯಕ ಸಬ್ಇನ್ಸ್ ಪೆಕ್ಟರ್ ಅಪರಿಚಿತ ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ರಸ್ತೆ, ಅಗ್ನಿಶಾಮಕ ಸೇವೆ ಇಲಾಖೆ ಸಚಿವ ಸುಜಿತ್ ಬೋಸ್ ಸೋಮವಾರ ತಡರಾತ್ರಿ ಹೇಳಿದ್ದಾರೆ.
ಎರಡನೇ ಲಿಫ್ಟ್ ನಲ್ಲಿ ಇನ್ನು ಎರಡು ಮೃತದೇಹಗಳು ಪತ್ತೆಯಾಗಿವೆ. ಶವಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಇಬ್ಬರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ರೈಲ್ವೆ ಹಿರಿಯ ಅಧಿಕಾರಿ ಪಾರ್ಥಸಾರಥಿ ಮೊಂಡಲ್ ಕಾಣೆಯಾಗಿದ್ದು ಅವರು ಕೂಡ ಮೃತಪಟ್ಟಿರುವ ಸಾಧ್ಯತೆ ಇದೆ. ಗಿರೀಶ್, ಅನಿರುದ್ಧ ಸೇರಿ ನಾಲ್ವರು ಅಗ್ನಿಶಾಮಕದಳದ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕೂಡ ಶೋಧ ಕಾರ್ಯಾಚರಣೆ ನಡೆಸಿದೆ. ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಿಂದ ತೀವ್ರ ಅಘಾತಕ್ಕೆ ಒಳಗಾಗಿದ್ದೇವೆ. ಮುಖ್ಯಮಂತ್ರಿಯವರು ನಿರಂತರ ಮಾಹಿತಿ ಪಡೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ ಎಂದು ಸಚಿವ ಸುಜಿತ್ ಬೋಸ್ ಹೇಳಿದ್ದಾರೆ.