ಫತೇಪುರ್: ಇಲ್ಲಿನ ಜೆಹಾನಾಬಾದ್ ಪ್ರದೇಶದಲ್ಲಿ ಮಂಗಳವಾರ ಆಟೋ ರಿಕ್ಷಾವೊಂದು ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ.
ಕಾನ್ಪುರದ ಘಟಂಪುರದಿಂದ 11 ಮಂದಿ ಆಟೋ ರಿಕ್ಷಾದಲ್ಲಿ ಜೆಹಾನಾಬಾದ್‌ಗೆ ಬರುತ್ತಿದ್ದಾಗ ಚಿಲ್ಲಿ ತಿರುವಿನ ಬಳಿ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿ, ಫತೇಪುರದಲ್ಲಿ ನಡೆದ ರಸ್ತೆ ಅಪಘಾತ ಅತ್ಯಂತ ದುಃಖಕರವಾಗಿದೆ. ಅವರ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ನನ್ನ ಆಳವಾದ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮೋದಿ ಅವರು ಫತೇಪುರದಲ್ಲಿ ನಡೆದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬರ ಬಂಧುಗಳಿಗೆ 2 ಲಕ್ಷ ರೂ., ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಅಪಘಾತದ ನಂತರ ವಾಹನ ಸಮೇತ ಪರಾರಿಯಾಗಿರುವ ಟ್ಯಾಂಕರ್ ಚಾಲಕನನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.