ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಫ್ಲಿಯಾಜ್ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 9 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುರುವಾರ ಸಂಜೆ ಪೂಂಚ್ ಜಿಲ್ಲೆಯ ಬಫ್ಲಿಯಾಜ್ ಪ್ರದೇಶದ ತರ್ರಾರನ್ ವಾಲಿ ಗಲಿ ಎಂಬಲ್ಲಿ ಟಾಟಾ ಸುಮೋ ಆಳವಾದ ಕಮರಿಗೆ ಬಿದ್ದು ಅವಘಡ ಸಂಭವಿಸಿದೆ. ಮದುವೆ ಪಾರ್ಟಿಗೆ ತೆರಳುತ್ತಿದ್ದ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 9 ಸದಸ್ಯರು ಮೃತಪಟ್ಟಿದ್ದಾರೆ.
ಸುರನ್ ಕೋಟೆಯ ಮರ್ಹಾ ಪ್ರದೇಶದಲ್ಲಿನ ಮದುವೆ ಸಮಾರಂಭಕ್ಕೆ ಜನರನ್ನು ಹೊತ್ತೊಯ್ಯುತ್ತಿದ್ದ ವಾಹನ ಗುರುವಾರ ಸಂಜೆ ಟರ್ರಾರನ್ ವಾಲಿ ಗಲಿಯಲ್ಲಿ ಆಳವಾದ ಕಮರಿಗೆ ಬಿದ್ದಿದೆ ಎಂದು ಪೂಂಚ್ ನ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಲ್ಯಾನ್ ನ ಗುಲಾಮ್ ರಬಾನಿ, ಮೊಹಮ್ಮದ್ ಫಝಲ್, ಮುಷ್ತಾಕ್ ಅಹ್ಮದ್, ಫಝಲ್ ಅಹ್ಮದ್, ಗುರ್ಸಾಯಿಯ ಗುಲಾಮ್ ಗಲಾನಿ ಮತ್ತು ದಂಗಲದ ಮೊಹಮ್ಮದ್ ಅಕ್ಬರ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇತರರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
ವಾಹನದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಇದ್ದರು. 13 ಜನರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಗುರ್ಸಾಯಿಯ ಚಾಲಕ ಜಹೀರ್ ಅಬ್ಬಾಸ್ ಚಾಲನೆ ಮಾಡುತ್ತಿದ್ದು, ಗುಡ್ಡಗಾಡು ರಸ್ತೆಯಲ್ಲಿ ಅತಿವೇಗ, ನಿರ್ಲಕ್ಷದಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣವೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.