ನವರಾತ್ರಿಯ ಒಂಬತ್ತು ದಿನಗಳು ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ದುರ್ಗಾ ಮಾತೆಯು ಅಸುರ ಶಕ್ತಿಯನ್ನು ಹುಟ್ಟಡಗಿಸುವುದಕ್ಕಾಗಿ ಒಂಬತ್ತು ರೂಪಗಳಲ್ಲಿ ಜನ್ಮ ತಾಳಿ ದುಷ್ಟರನ್ನು ವಧಿಸಿ ಶಿಷ್ಟರ ರಕ್ಷಣೆಯನ್ನು ಮಾಡುತ್ತಾರೆ. ಆ ಒಂಬತ್ತು ರೂಪಗಳು ಯಾವುದು ಅನ್ನುವುದರ ಮಾಹಿತಿ ಇಲ್ಲಿದೆ.
ಶೈಲಪುತ್ರಿ
ದೇವಿಯ ಒಂಬತ್ತು ರೂಪಗಳಲ್ಲಿ ಮೊದಲನೆಯದ್ದು ಶೈಲಪುತ್ರಿ. ದುರ್ಗೆಯ ಶುದ್ಧ ರೂಪವಾಗಿರುವ ಶೈಲಪುತ್ರಿ ನಿಸರ್ಗದ ಮಾತೆ ಎಂದೇ ಪರಿಗಣಿತ. ಗೂಳಿಯ ಮೇಲೆ ಕುಳಿತಿರುವ ದೇವಿಗೆ ಸತಿ, ಭವಾನಿ, ಪಾರ್ವತಿ ಮತ್ತು ಹೇಮಾವತಿ ಎಂಬ ಹೆಸರೂ ಇದೆ.
ಬ್ರಹ್ಮಚಾರಿಣಿ
ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ದೈವಿಕ ಅಂಶವನ್ನು ಮೈಗೂಡಿಸಿಕೊಂಡು ಮೋಕ್ಷಕ್ಕೆ ದಾರಿ ತೋರುವ ಮಾತೆ ಈ ಬ್ರಹ್ಮಚಾರಿಣಿ. ಶಾಂತಿ, ಸಮೃದ್ಧಿ ಮತ್ತು ವೈವಾಹಿಕ ಸುಖವನ್ನು ಭಕ್ತರಿಗೆ ದೇವಿ ನೀಡುತ್ತಾಳೆ.
ಚಂದ್ರಘಂಟ
ದುರ್ಗೆಯ ಮೂರನೇ ರೂಪ ಚಂದ್ರಘಂಟ. ತನ್ನ ಹಣೆಯಲ್ಲಿ ಗಂಟೆಯ ಆಕಾರದ ಚಂದ್ರನನ್ನು ಹೊಂದಿರುವ ಮಾತೆ ಶಾಂತಿಪ್ರಿಯೆ. ಕೆಟ್ಟದ್ದನ್ನು ನಾಶ ಮಾಡುವ ಶಕ್ತಿ ಈ ದೇವಿಗಿದೆ.
ಕೂಶ್ಮಾಂಡ
ದುರ್ಗೆಯ ನಾಲ್ಕನೇ ರೂಪ ಕೂಶ್ಮಾಂಡ. ವಿಶ್ವದ ರಚನೆಕಾರರು ಎಂಬುದಾಗಿ ಈ ರೂಪದಲ್ಲಿ ತಾಯಿಯನ್ನು ನಂಬಲಾಗುತ್ತದೆ. ಮಾತೆಯ ಕೈಯಿಂದ ಹೊರಬರುವ ಬೆಳಕು ಜಗತ್ತನ್ನು ಅಂಧಕಾರದಿಂದ ದೂರವಿರಿಸುತ್ತದೆ. ದೇವಿಯ ಸಿಂಹ ದೈಹಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ.
ಸ್ಕಂದ ಮಾತಾ
ದುರ್ಗೆಯ ಐದನೇ ರೂಪ ಸ್ಕಂದಮಾತಾ. ಬಲಗೈಯಲ್ಲಿ ಕಾರ್ತಿಕೇಯನನ್ನು ಎತ್ತಿಕೊಂಡಿದ್ದರಿಂದ ಕಾರ್ತಿಕೇಯನ ತಾಯಿ ಎಂಬ ಹೆಸರು ಬಂದಿದೆ. ಭಕ್ತರನ್ನು ಹರಸುತ್ತಾಳೆ ಈ ದೇವಿ.
ಕಾತ್ಯಾಯಿನಿ
ಕಾತ್ಯಾಯಿನಿ ಮಾತೆಯನ್ನು ಶಕ್ತಿ ಸ್ಥೈರ್ಯದ ದೇವತೆ ಎಂದೂ ಕರೆಯುತ್ತಾರೆ. ಭಯವನ್ನು ಹೋಗಲಾಡಿಸುವಲ್ಲಿ ಕಾತ್ಯಾಯಿನಿ ಮಾತೆ ಪೂಜನೀಯವಾಗಿದ್ದಾರೆ. ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಯನ್ನು ನೆಲೆಗೊಳಿಸುವುದಕ್ಕಾಗಿ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ.
ಕಾಳರಾತ್ರಿ
ಮಹಾಮಾಯ ಕಾಳರಾತ್ರಿ ದುರ್ಗೆಯ ಏಳನೆಯ ರೂಪವಾಗಿದೆ. ಕಾಳರಾತ್ರಿ ಮಹಾಮಾಯ ಎಂಬ ಹೆಸರೂ ದೇವರಿಗಿದೆ. ಅವಳನ್ನು ಶುಭಕರಿ ಎಂದೂ ಕರೆಯುತ್ತಾರೆ. ಅವಳು ದೇವತೆ ಮಹಾಕಾಳಿಯನ್ನು ಹೋಲುತ್ತಾಳೆ.
ಮಹಾಗೌರಿ
ಮಹಾಗೌರಿ ದೇವಿಯ ಎಂಟನೇ ರೂಪ. ಅವಳ ಪ್ರಕಾಶಮಾನವಾದ ದೇಹದಿಂದ ದೇವಿಗೆ ಈ ಹೆಸರು ಬಂದಿದೆ. ಪಾಪಗಳನ್ನು ಭಕ್ತರಿಂದ ಗೌರಿ ತೊಡೆದು ಹಾಕುತ್ತಾಳೆ.
ಸಿದ್ಧಿದಾತ್ರಿ
ದೇವಿಯ ಒಂಭತ್ತನೇ ರೂಪವಾಗಿದೆ ಸಿದ್ಧಿದಾತ್ರಿ. ಅವಳ ಹೆಸರೇ ಸೂಚಿಸುವಂತೆ ಅಲೌಕಿಕ ಶಕ್ತಿಯನ್ನು ಅತ್ಯುತ್ತಮವಾಗಿ ಪೂಜಿಸಲಾಗುತ್ತದೆ. ಕಮಲದ ಮೇಲೆ ಕುಳಿತು, ಆಕೆಯು ಎಲ್ಲಾ ಭಕ್ತರನ್ನು ಆಶೀರ್ವದಿಸುತ್ತಾಳೆ.