ಭಾರೀ ಬಹುಮತದೊಂದಿಗೆ ಮೇ 2019ರಲ್ಲಿ ಅಧಿಕಾರದಲ್ಲಿ ಮುಂದುವರೆದ ಬಿಜೆಪಿ ಸರ್ಕಾರ, ಇದಾದ ಮೂರೇ ತಿಂಗಳಲ್ಲಿ, ಆಗಸ್ಟ್ 5, 2019ರಂದು ಜಮ್ಮು ಕಾಶ್ಮೀರಕ್ಕೆ ಸಂವಿಧಾನದಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂದಕ್ಕೆ ಪಡೆಯಲು 370ನೇ ವಿಧಿಯನ್ನು ರದ್ದುಪಡಿಸಿತು. ಈ ಮೂಲಕ ಜಮ್ಮು ಕಾಶ್ಮೀರ ರಾಜ್ಯವಾಗಿದ್ದ ಭೂಪ್ರದೇಶವನ್ನು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳೆಂದು ವಿಂಗಡಿಸಲಾಯಿತು.
ಅಯೋಧ್ಯೆಯಲ್ಲಿ ರಾಮ ಮಂದಿರ
ರಾಮ ಮಂದಿರದ ನಿರ್ಮಾಣದ ಬಗ್ಗೆ ಹೇಳಿಕೊಂಡೇ ದಶಕಗಳಿಂದ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವ ಬಿಜೆಪಿ ಆಗಸ್ಟ್ 2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. ಮುಂದಿನ ವರ್ಷದ ಜನವರಿ 24ರಂದು ಭವ್ಯ ರಾಮ ಮಂದಿರವನ್ನು ಉದ್ಘಾಟಿಸಿ, ರಾಮ ಲಲ್ಲಾ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಲು ಬಿಜೆಪಿ ಉತ್ಸುಕವಾಗಿದೆ.
ಸ್ವಾತಂತ್ರ‍್ಯದ ಅಮೃತ ಮಹೋತ್ಸವ
ಬ್ರಿಟಿಷರಿಂದ ಭಾರತದ ಆಡಳಿತವು ದೇಶವಾಸಿಗಳಿಗೆ ವರ್ಗಾವಣೆಗೊಂಡ 75ನೇ ವರ್ಷದ ಸಂಭ್ರಮದ ಪ್ರಯುಕ್ತ ’ಆಜ಼ಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ದೇಶಾದ್ಯಂತ ಚಾಲನೆ ನೀಡಲಾಗಿದೆ. ದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ದುಡಿದ ಹೋರಾಟಗಾರರ ಕುರಿತು ದೇಶವಾಸಿಗಳಿಗೆ ಪರಿಚಯಿಸುವ ಕಾಯಕಕ್ಕೆ ಈ ಮೂಲಕ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ.
ಸಂಸ್ಕತಿ ಸಚಿವಾಲಯದಿಂದ ಈ ಕುರಿತು ವಿಶೇಷ ಕಾರ್ಯಕ್ರಮಗಳ ಆಯೋಜನೆ, ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಭಾರತ ಪ್ರಜಾಪ್ರಭುತ್ವ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕುರಿತ ವಿಶೇಷ ಚಿತ್ರಗಳ ಪ್ರದರ್ಶನ ಸೇರಿದಂತೆ ಅನೇಕದ ದೊಡ್ಡ ಕಾರ್ಯಕ್ರಮಗಳನ್ನು ಭಾರತ ಹಮ್ಮಿಕೊಂಡಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ
ಕೋವಿಡ್ ಸೋಂಕಿನ ಮೊದಲ ಅಲೆಯ ಸಂದರ್ಭ ಪ್ರಧಾನಿ ಮೋದಿ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಉಚಿತ ರೇಷನ್ ವಿತರಣೆಗೆ ಘೋಷಣೆ ಮಾಡಿದರು. ಇದೇ ಯೋಜನೆಯನ್ನು ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲೂ ವಿಸ್ತರಿಸಲಾಯಿತು. ಈ ಯೋಜನೆಯಡಿ ದೇಶಾದ್ಯಂತ 80 ಕೋಟಿ ಫಲಾನುಭವಿಗಳಿಗೆ ಉಚಿತ ಪಡಿತರ ನೀಡಲಾಗುತ್ತಿತ್ತು.
ಆಯುಷ್ಮಾನ್ ಭಾರತ್ ಹಾಗೂ ಸರ್ವರಿಗೂ ಲಸಿಕೆ
ಕೋವಿಡ್ – 19 ಸೋಂಕಿನ ವಿರುದ್ಧ ಕೇಂದ್ರ ಸರ್ಕಾರವು ದೇಶಾದ್ಯಂತ ಲಸಿಕಾಕರಣ ಯೋಜನೆಗೆ ಚಾಲನೆ ನೀಡಿದೆ. ಜಗತ್ತಿನ ಅತಿ ದೊಡ್ಡ ಲಸಿಕಾಕರಣ ಕಾರ್ಯಕ್ರಮದಡಿ ಇದುವರೆಗೂ 193 ಕೋಟಿ ಡೋಸ್‌ಗಳಷ್ಟು ಕೋವಿಡ್ ಲಸಿಕೆ ನೀಡಲಾಗಿದೆ. ವಯಸ್ಕ ನಾಗರಿಕರಿಗೆ ಮುನ್ನೆಚ್ಚರಿಕೆಯ ಡೋಸ್‌ಗಳ ಕುರಿತಂತೆ ಜಾಗೃತಿ ಮೂಡಿಸುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ.
ಕಡಿಮೆ ಆದಾಯವಿರುವ ಕುಟುಂಬಗಳಿಗೆ ಆರೋಗ್ಯ ವಿಮೆಯ ಯೋಜನೆ ತಂದ ಮೋದಿ ಸರ್ಕಾರ, ಆಯುಷ್ಮಾನ್ ಭಾರತ್ ಯೋಜನೆಯಡಿ 22 ಕೋಟಿಗೂ ಅಧಿಕ ಮಂದಿಗೆ ಉಚಿತ ಆರೋಗ್ಯ ವಿಮೆ ಮಾಡಿಸಿದೆ.
ಕಿರು ಅವಧಿಯಲ್ಲಿ ದೇಶದಲ್ಲೇ ತಯಾರಾದ ಲಸಿಕೆಗಳು
ಕೋವಿಡ್ ಸೋಂಕಿಗೆ ಮದ್ದನ್ನು ಬಲು ಬೇಗ ಅಭಿವೃದ್ಧಿ ಪಡಿಸಿದ ಭಾರತದ ಲ್ಯಾಬ್‌ಗಳು ಅಷ್ಟೇ ಬೇಗ ಅಪಾರ ಪ್ರಮಾಣದಲ್ಲಿ ಲಸಿಕಾ ಡೋಸ್‌ಗಳನ್ನು ಉತ್ಪಾದನೆ ಮಾಡಿದವು. ಇದರ ಪರಿಣಾಮ ದೇಶವಾಸಿಗಳಿಗೆ ಮಾತ್ರವಲ್ಲದೇ ’ಲಸಿಕಾ ಮೈತ್ರಿ ಯೋಜನೆ’ ಅಡಿ ಭಾರತ ಮಿತ್ರ ರಾಷ್ಟ್ರಗಳಿಗೂ ಅಪಾರ ಪ್ರಮಾಣದಲ್ಲಿ ಲಸಿಕೆಗಳನ್ನು ವಿತರಿಸಲಾಗಿದೆ.
ಅಫ್ಘಾನಿಸ್ತಾನ & ಉಕ್ರೇನ್‌ನಿಂದ ರಕ್ಷಣಾ ಕಾರ್ಯಾಚರಣೆ
ಗಲಭೆಪೀಡಿತ ಅಫ್ಘಾನಿಸ್ತಾನ ಹಾಗೂ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಯಿತು. ತಾಲಿಬಾನ್ ಮರುವಶಕ್ಕೆ ಸಿಲುಕಿದ ಅಫ್ಘಾನಿಸ್ತಾನದಿಂದ 700 ಭಾರತೀಯರನ್ನು ರಕ್ಷಿಸಿ ಕರೆತರಲಾಗಿದೆ.
ಇದೇ ವೇಳೆ ರಷ್ಯಾ ಆಕ್ರಮಣಕ್ಕೀಡಾದ ಉಕ್ರೇನ್‌ನಲ್ಲಿ ಸಿಲುಕಿದ್ದ 23,000ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಯಿತು. ಈ ವೇಳೆ ವಿಶೇಷ ಪ್ರತಿನಿಧಿಗಳಾಗಿ ನಾಲ್ವರು ಕೇಂದ್ರ ಮಂತ್ರಿಗಳನ್ನು ಉಕ್ರೇನ್‌ಗೆ ಕಳುಹಿಸಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲಾಯಿತು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
ಈ ಯೋಜನೆಯಡಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 6,000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು. ಯೋಜನೆಯ 11ನೇ ಕಂತಿನ ಪಾವತಿಯು ಮೇ 31ರಂದು ಆಗಬೇಕಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ
ಕೈಗೆಟುಕುವ ಬೆಲೆಯಲ್ಲಿ ಸರ್ವರಿಗೂ ಗೃಹ ನಿರ್ಮಾಣ ಸಾಧ್ಯವಾಗಿಸುವ ಈ ಯೋಜನೆಯನ್ನು ಮೋದಿ ಸರ್ಕಾರ 2015 ರಲ್ಲಿ ಆರಂಭಿಸಿದೆ. ಮಾರ್ಚ್ 2020ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ, ದೇಶದ ಎರಡು ಕೋಟಿಗೂ ಅಧಿಕ ಮಂದಿಗೆ ಈ ಯೋಜನೆಯಡಿ ಮನೆಗಳನ್ನು ಕಟ್ಟಿಸಿಕೊಡಲಾಗಿದೆ.