ಪಾಕಿಸ್ತಾನದ ಜೈಲಿನಲ್ಲಿರುವ 6 ಭಾರತೀಯ ಖೈದಿಗಳು ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಮೃತಪಟ್ಟ ಖೈದಿಗಳಲ್ಲಿ ಐವರು ಮೀನುಗಾರರು. ವಿಪರ್ಯಾಸ ಅಂದ್ರೆ ಈ ಆರು ಮಂದಿಯೂ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರು. ಅವರನ್ನು ಭಾರತಕ್ಕೆ ಹಿಂದಿರುಗಿಸುವಂತೆ ಕೇಳಿದ್ದರೂ ಪಾಕಿಸ್ತಾನ ಸೊಪ್ಪು ಹಾಕಿರಲಿಲ್ಲ.
ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಖೈದಿಗಳ ಸಾವಿನ ಪ್ರಕರಣ ಕಳವಳಕಾರಿಯಾಗಿದೆ. ಭಾರತೀಯ ಖೈದಿಗಳ ಭದ್ರತೆಯ ವಿಷಯವನ್ನು ಇಸ್ಲಾಮಾಬಾದ್‌ನಲ್ಲಿರುವ ನಮ್ಮ ಹೈಕಮಿಷನ್ ಪದೇ ಪದೇ ಪ್ರಸ್ತಾಪಿಸಿದೆ. ಎಲ್ಲಾ ಭಾರತೀಯ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ 6 ಭಾರತೀಯ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಭಾರತ-ಪಾಕಿಸ್ತಾನ ನಡುವಿನ ಅಂತರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ ಮುಳುಗುತ್ತಿದ್ದ ಆರು ಭಾರತೀಯ ಮೀನುಗಾರರನ್ನು ರಕ್ಷಿಸಿದ್ದೇವೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿಕೊಂಡ ದಿನವೇ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಪೂರ್ವ ಸಮುದ್ರ ತೀರದಲ್ಲಿ ಗಸ್ತು ತಿರುಗುತ್ತಿದ್ದ ಪಾಕಿಸ್ತಾನ್ ಮಾರಿಟೈಮ್ ಸೆಕ್ಯುರಿಟಿ ಏಜೆನ್ಸಿ (ಪಿಎಂಎಸ್‌ಎ) ಆರು ಭಾರತೀಯ ಮೀನುಗಾರರನ್ನು ನೋಡಿತ್ತು. ತಕ್ಷಣವೇ ಮೀನುಗಾರಿಕಾ ದೋಣಿಯಲ್ಲಿದ್ದವರನ್ನೆಲ್ಲ ರಕ್ಷಿಸಿದ್ದೇವೆ ಅಂತಾ ಪಾಕಿಸ್ತಾನ ಹೇಳಿಕೊಂಡಿದೆ.