87 ವರ್ಷದ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ದಾರುಣ ಘಟನೆಯು ದೆಹಲಿಯ ತಿಲಕ್ ನಗರದಲ್ಲಿ ನಡೆದಿದೆ. ಹಾಸಿಗೆ ಹಿಡಿದಿದ್ದ ವೃದ್ಧೆಯ ಮನೆಗೆ ನುಗ್ಗಿದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದಾರೆ ಅಲ್ಲದೇ ದೂರು ದಾಖಲಿಸಿಕೊಂಡಿಲ್ಲ ಎಂದು ವೃದ್ಧೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಂತ್ರಸ್ತೆಯ ಕುಟುಂಬಸ್ಥರು ನೀಡುವ ಮಾಹಿತಿಯ ಪ್ರಕಾರ ಆರೋಪಿಯು ಮಧ್ಯಾಹ್ನ 12:30ರ ಸುಮಾರಿಗೆ ಮನೆಯ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡನು. ವೃದ್ಧೆ ಯಾರೆಂದು ಪ್ರಶ್ನಿಸಿದಾಗ ತಾನು ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು ಯಾವುದೋ ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದಾಗಿ ಹೇಳಿಕೊಂಡಿದ್ದ. ಆದರೆ ಆತನ ನಡವಳಿಕೆಯಿಂದ ಅನುಮಾನಗೊಂಡ ವೃದ್ಧೆಯು ಸಹಾಯಕ್ಕಾಗಿ ಕಿರುಚಿದ್ದಾರೆ. ಆದರೆ ಈ ವೇಳೆ ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಆರೋಪಿಯು ಬಳಿಕ ಅತ್ಯಾಚಾರ ಎಸಗಿದ್ದಾನೆ. ಮಾತ್ರವಲ್ಲದೇ ವೃದ್ಧೆಯ ಫೋನ್ ಕದ್ದು ಎಸ್ಕೇಪ್ ಆಗಿದ್ದಾನೆ. ಈ ಘಟನೆ ನಡೆದ ಒಂದು ಗಂಟೆಯ ಬಳಿಕ ವೃದ್ಧೆಯ ಪುತ್ರಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸಂತ್ರಸ್ತೆ ಹಾಗೂ ಅವರ ಪುತ್ರಿ ಇಬ್ಬರೂ ವೃದ್ಧರಾಗಿದ್ದು ಒಂಟಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ನಾನು ದೆಹಲಿಗೆ ಬಂದಿದ್ದೇನೆ. ಅವರು ವೃದ್ಧರು ಎಂಬ ಕಾರಣಕ್ಕೆ ತನಿಖೆಯಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಇದರಿಂದ ಅವರಿಗೆ ಒತ್ತಡವುಂಟಾಗುತ್ತದೆ. ಪೊಲೀಸರು ಕಳ್ಳತನದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಮೊಮ್ಮಗಳು ಕೆನಡಾದಲ್ಲಿ ನೆಲೆಸಿದ್ದಾರೆ. ಆಕೆಗೂ ತಕ್ಷಣವೇ ಘಟನೆ ನಡೆದ ಸ್ಥಳಕ್ಕೆ ಬರುವುದು ಸಾಧ್ಯವಿರಲಿಲ್ಲ. ಆದರೆ ಪೊಲೀಸರು ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ನನ್ನ ಚಿಕ್ಕಮ್ಮ ತಮ್ಮ ಸ್ವಂತ ಮನೆಯಲ್ಲಿಯೆ ಅಭದ್ರತೆಯನ್ನು ಹೊಂದಿದ್ದಾರೆ ಎಂದು ವೃದ್ಧೆಯ ಸಂಬಂಧಿಯೊಬ್ಬರು ದೂರಿದ್ದಾರೆ.
ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಪೊಲೀಸರು ವೃದ್ಧೆಯು ನಮಗೆ ಅತ್ಯಾಚಾರದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಅವರು ಕೇವಲ ಕಳ್ಳತನ ನಡೆದಿರುವ ಬಗ್ಗೆ ಮಾತ್ರ ನಮಗೆ ದೂರು ನೀಡಿದ್ದರು ಎಂದು ಹೇಳಿದ್ದಾರೆ.