ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರು ಸಿಸಿಬಿ ಪೊಲೀಸರು ಬೃಹತ್ ಜಾಲವನ್ನು ಭೇದಿಸಿದ್ದಾರೆ.
ಹೂಡಿಕೆ ಹೆಸರಲ್ಲಿ ಬರೋಬ್ಬರಿ 854 ಕೋಟಿ ರೂಪಾಯಿ ವಂಚಿಸಿದ್ದ ಗ್ಯಾಂಗ್ ನ 6 ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಮನೋಜ್ ಅಲಿಯಾಸ್ ಜಾಕ್, ಫಣೀಂದ್ರ, ಚಕ್ರಧರ್ ಅಲಿಯಾಸ್ ಚಕ್ರಿ, ಶ್ರೀನಿವಾಸ್, ಸೋಮಶೇಖರ್ ಹಾಗೂ ವಸಂತ್ ಕುಮಾರ್ ಬಂಧಿತರು. ಮನೋಜ್ ಅಲಿಯಾಸ್ ಜಾಕ್ ಪ್ರಮುಖ ಆರೋಪಿಯಾಗಿದ್ದಾನೆ. ಗ್ಯಾಂಗ್ ನ ಇಬ್ಬರು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ.
ಈ ಗ್ಯಾಂಗ್ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ 5,033 ಪ್ರಕರಣಗಳು ದಾಖಲಾಗಿವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಬಂಧಿತರಿಂದ 5 ಕೋಟಿ ರೂಪಾಯಿ, 13 ಮೊಬೈಲ್ ಗಳು, 7 ಲ್ಯಾಪ್ ಟಾಪ್ ಗಳು, ಪ್ರಿಂಟರ್, ಸ್ವೈಪಿಂಗ್ ಉಪಕರಣ, ಹಾರ್ಡ್ ಡಿಸ್ಕ್ ಹಾಗೂ ಹಲವು ಬ್ಯಾಂಕ್ ಖಾತೆಗಳ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಣ ಹೂಡಿಕೆ ಮಾಡಿಕೊಂಡು ವಂಚನೆ ಮಾಡಿದ್ದಾಗಿ ಬೆಂಗಳೂರು ನಗರದ ನಿವಾಸಿಯೊಬ್ಬರು ಸೈಬರ್ ಕ್ರೈಂಗೆ ದೂರು ನೀಡಿದ್ದರು. ಇದೇ ರೀತಿ ವಿವಿಧ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಜರೇಶ್ ಕಿಲ್ಲೇದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.