ದೇಶದಲ್ಲಿ ಅದೆಷ್ಟೋ ಮಂದಿಗೆ ಕೋವಿಡ್-19 ಲಸಿಕೆಯ ಎರಡನೇ ಡೋಸ್ ಸಿಕ್ಕಿಲ್ಲ. ಇಂಥದ್ದರಲ್ಲಿ ಬಿಹಾರದ 84-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆಯ 11 ಶಾಟ್‌ಗಳನ್ನು ಪಡೆದು, 12ನೇ ಚುಚ್ಚುಮದ್ದು ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ.
ಸಿಬ್ಬಂದಿಯ ಕಣ್ತಪ್ಪಿಸಿ ಈತ ಇಷ್ಟು ಲಸಿಕೆಗಳನ್ನು ಪಡೆದಿದ್ದು ಹೇಗೆಂದು ಕಂಡುಕೊಳ್ಳಲು ತನಿಖೆಗೆ ಆದೇಶಿಸಲಾಗಿದೆ.
ರಾಜ್ಯದ ಮಧೇಪುರ ಜಿಲ್ಲೆಯ ಒರಾಯ್ ಎಂಬ ಗ್ರಾಮದ ಬ್ರಹ್ಮದೇವ್ ಮಂಡಲ್ ಕೋವಿಡ್‌ನ 12ನೇ ಚುಚ್ಚುಮದ್ದು ಪಡೆಯಲು ಬಂದ ವೇಳೆ ಸಿಕ್ಕಿಬಿದ್ದಿದ್ದಾರೆ. ಚುಚ್ಚುಮದ್ದುಗಳಿಂದ ತನ್ನ ದೇಹದ ಮೇಲೆ ಲಾಭದಾಯಕ ಪರಿಣಾಮಗಳು ಆಗಿವೆ ಎನಿಸಿದ ಕಾರಣ ತಾನು ಇಷ್ಟೊಂದು ಲಸಿಕೆಗಳನ್ನು ಪಡೆದಿದ್ದಾಗಿ ಅಂಚೆ ಇಲಾಖೆಯ ನಿವೃತ್ತ ನೌಕರರಾದ ಮಂಡಲ್ ಹೇಳಿಕೊಂಡಿದ್ದಾರೆ.
SHOCKING NEWS: ಸಿಲಿಂಡರ್ ಸ್ಪೋಟ, ಒಂದೇ ಕುಟುಂಬದ 5 ಮಕ್ಕಳು ಸಜೀವ ದಹನ
ಫೆಬ್ರವರಿ 12, 2021ರಲ್ಲಿ ತಮ್ಮ ಮೊದಲ ಚುಚ್ಚುಮದ್ದು ಪಡೆದ ಮಂಡಲ್, ಮಾರ್ಚ್, ಮೇ, ಜೂನ್, ಜುಲೈ, ಆಗಸ್ಟ್‌ಗಳಲ್ಲಿ ತಲಾ ಒಂದೊಂದು ಮತ್ತು ಸೆಪ್ಟೆಂಬರ್‌ನಲ್ಲಿ ಮೂರು ಚುಚ್ಚುಮದ್ದು ಪಡೆದಿದ್ದಾರೆ. ಹೀಗೆ ಮಾಡಿಕೊಂಡು ಡಿಸೆಂಬರ್ 30ರ ವೇಳೆಗೆ ಸಾರ್ವಜನಿಕ ಆರೋಗ್ಯ ಕೇಂದ್ರವೊಂದರಲ್ಲಿ ಮಂಡಲ್ 11 ಚುಚ್ಚುಮದ್ದುಗಳನ್ನು ಪಡೆದಿದ್ದಾರೆ.
ಎಂಟು ಬಾರಿ ಚುಚ್ಚುಮದ್ದು ಪಡೆಯುವ ವೇಳೆ ಮಂಡಲ್ ತಮ್ಮ ಆಧಾರ್ ಕಾರ್ಡ್ ಮತ್ತು ಫೋನ್ ನಂಬರ್ ಬಳಸಿದ್ದು, ಮೂರು ಬಾರಿ ತಮ್ಮ ಮಡದಿಯ ಮತದಾರರ ಗುರುತಿನ ಚೀಟಿ ಮತ್ತು ದೂರವಾಣಿ ಸಂಖ್ಯೆ ಬಳಸಿದ್ದಾರೆ.
ಮಧೇಪುರ ಜಿಲ್ಲೆಯ ಸಾರ್ವಜನಿಕ ಶಸ್ತ್ರಚಿಕಿತ್ಸಕರಾದ ಅಮರೇಂದ್ರ ಪ್ರತಾಪ್ ಸಿಂಗ್, ಇಷ್ಟೊಂದು ಲಸಿಕೆಗಳನ್ನು ಪಡೆಯಲು ಮಂಡಲ್‌ರಿಂದ ಸಾಧ್ಯವಾಗಿದ್ದು ಹೇಗೆಂದು ಕಂಡು ಹಿಡಿಯಲು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.