ಲಖ್ನೋ: 82 ವರ್ಷದ ಮಹಿಳೆಯನ್ನು ಪಿಟ್ ಬುಲ್ ನಾಯಿ ಕಚ್ಚಿ ಸಾಯಿಸಿದೆ. ಮಂಗಳವಾರ ಬೆಳಗ್ಗೆ ಲಖ್ನೋದ ಕೈಸರ್ ಬಾಗ್ ಪ್ರದೇಶದಲ್ಲಿ ನಿವೃತ್ತ ಶಿಕ್ಷಕಿ ಅವರ ಮಗ ಸಾಕಿದ್ದ ಪಿಟ್ ಬುಲ್ ನಾಯಿಯಿಂದ ಸಾವಿಗೀಡಾಗಿದ್ದಾರೆ.
ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದೆ. ಆಕೆಯ ಮಗ, ಜಿಮ್ ತರಬೇತುದಾರ ಅಮಿತ್ ಪಿಟ್ಬುಲ್ ಮತ್ತು ಲ್ಯಾಬ್ರಡಾರ್ ತಳಿಯ ಎರಡು ಸಾಕು ನಾಯಿಗಳನ್ನು ಹೊಂದಿದ್ದಾರೆ. ಮಹಿಳೆಯ ಮೇಲೆ ದಾಳಿ ಮಾಡಿದ ಬ್ರೌನಿ ಎಂಬ ನಾಯಿಯನ್ನು ಮೂರು ವರ್ಷಗಳ ಹಿಂದೆ ಮನೆಗೆ ತರಲಾಗಿತ್ತು. ಈ ಕುಟುಂಬ ಕೈಸರ್ ಬಾಗ್ ನ ಬಂಗಾಳಿ ಟೋಲಾ ಪ್ರದೇಶದಲ್ಲಿ ವಾಸವಾಗಿದೆ.
ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಶೀಲಾ ಅವರನ್ನು ಬಲರಾಂಪುರ್ ಆಸ್ಪತ್ರೆಗೆ ಸಾಗಿಸಲಾಯಿತು, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಂತೆ ಸುಶೀಲಾ ಅವರ ದೇಹದ ಮೇಲೆ ಕುತ್ತಿಗೆಯಿಂದ ಹೊಟ್ಟೆಯವರೆಗೆ ಒಟ್ಟು 12 ತೀವ್ರ ಗಾಯಗಳು ಪತ್ತೆಯಾಗಿವೆ.
ನೆರೆಹೊರೆಯವರ ಪ್ರಕಾರ, ಬೆಳಿಗ್ಗೆ 6 ಗಂಟೆ ಸುಮಾರಿಗೆ ನಾಯಿಗಳು ಬೊಗಳುವುದು, ಸುಶೀಲಾ ಅವರ ಮೇಲೆ ದಾಳಿ ಮಾಡಿದ್ದರಿಂದ ಸಹಾಯಕ್ಕಾಗಿ ಕೂಗುವುದು ಕೇಳಿಸಿದೆ. ಅವರ ಮನೆಗೆ ಧಾವಿಸಿದರೂ ಒಳಗಿನಿಂದ ಬೀಗ ಹಾಕಿದ್ದರಿಂದ ಬಾಗಿಲು ತೆರೆಲು ಸಾಧ್ಯವಾಗಿಲ್ಲ. ಮಗ ಮನೆಗೆ ಬಂದಾಗ ಸುಶೀಲಾ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದೆ. ಆಸ್ಪತ್ರೆಗೆ ದಾಖಲಿಸಿದರೂ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.