ಶಿವಮೊಗ್ಗ: ಕರ್ನಾಟಕದ ಶಬರಿಮಲೈ ಎಂದೇ ಪ್ರಸಿದ್ಧಿಯಾದ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಶ್ರೀ ಕ್ಷೇತ್ರದಲ್ಲಿ ಜ.14ರಂದು ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾರೋಹಣದ ವರ್ಧಂತ್ಯೋತ್ಸವ ಸಮಾರಂಭ ನಡೆಯಲಿದೆ ಎಂದು ಡಾ. ವಿಶ್ವಸಂತೋಷ ಭಾರತಿ ಶ್ರೀಪಾದಂಗಳವರು ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಅಯ್ಯಪ್ಪ ಸ್ವಾಮಿಯ ಭಕ್ತರು ಹೆಚ್ಚಾಗುತ್ತಿದ್ದಾರೆ. ದೇಶದಲ್ಲಿ ಸುಮಾರು 33 ಕೋಟಿ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತರಿದ್ದು, ಕರ್ನಾಟಕದಲ್ಲಿ ಬೆಜ್ಜವಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಪ್ರಸಿದ್ಧಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜ.14ರಂದು ಮುಂಜಾನೆ ಗಣಪತಿ ಹೋಮದೊಂದಿಗೆ ಮಕರ ಸಂಕ್ರಾಂತಿ ಉತ್ಸವ ನಡೆಯಲಿದೆ ಹಾಗೂ ಪೀಠಾರೋಹಣದ ವರ್ಧಂತ್ಯೋತ್ಸವ ಕೂಡ ನಡೆಯಲಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಭಜನಾವಳಿ, ಭಕ್ತಿಭಾವ ಧಾರೆ, ಜ್ಯೋತಿ ಪೂಜೆ, ಅಡ್ಡಪಲ್ಲಕ್ಕಿ ಉತ್ಸವ, ಪೊಲೀಸ್ ಪೂಜೆ, ಹರಿವರಾಸನಂ ಮುಂತಾದ ಕಾರ್ಯಕ್ರಮಗಳು ಬೆಳಗಿನಿಂದ ಸಂಜೆಯವರೆಗೂ ನಡೆಯುತ್ತವೆ. ಮಧ್ಯಾಹ್ನ 2 ಗಂಟೆಗೆ ಧಾರ್ಮಿಕ ಸಭೆ ಆಯೋಜಿಸಲಾಗಿದೆ. ಇದರ ದಿವ್ಯ ಸಾನಿಧ್ಯವನ್ನು ಡಾ. ಸಂತೋಷ್ ಗುರೂಜಿ ವಹಿಸಲಿದ್ದು, ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ, ಹೊಸದುರ್ಗದ ಶ್ರೀ ಶಾಂತವೀರ ಮಹಾಸ್ವಾಮೀಜಿ ಉಪಸ್ಥಿತರಿರುತ್ತಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ರಕ್ಷಣಾ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ ನಾಯಕ್ ನೆರವೇರಿಸುವರು. ಬೆಜ್ಜವಳ್ಳಿ ಶ್ರೀ ಕ್ಷೇತ್ರದ ಸೋಮೇಶ್ವರ ಕೃಷ್ಣಯ್ಯ ಗುರುಸ್ವಾಮಿ ಆಶಯ ನುಡಿಗಳನ್ನಾಡುವರು. ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ಶಾಸಕರಾದ ಡಿ.ಎಸ್. ಅರುಣ್, ಭಾರತಿ ಶೆಟ್ಟಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಶ್ರೀ ಕ್ಷೇತ್ರದಿಂದ ಶ್ರೀ ಹರಿಹರಪೀಠ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿ ಮೈಸೂರಿನ ಪ್ರೊ. ನಂಜರಾಜ ಅರಸ್, ಶಿವಮೊಗ್ಗದ ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕ ಎಸ್. ಚಂದ್ರಕಾAತ್, ಮಂಗಳೂರಿನ ಪ್ರದೀಪ್ ಕುಮಾರ್ ರೈ ಅವರಿಗೆ ನೀಡಲಾಗುವುದು ಎಂದರು.