ಇಂಧನ ದರ ಏರಿಕೆಯಿಂದ ತತ್ತರಿಸಿರುವ ಬಹುತೇಕರು ಎಲೆಕ್ಟ್ರಿಕ್ ಸ್ಕೂಟರ್ ಗಳತ್ತ ಮುಖ ಮಾಡಿದ್ದು, ಆದರೆ ಕೆಲವೊಂದು ಸ್ಕೂಟರ್ ಗಳು ಸ್ಪೋಟಗೊಂಡಿರುವ ಪರಿಣಾಮ ಒಂದು ರೀತಿಯ ಆತಂಕ ಸೃಷ್ಟಿಯಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಫೋಟದ ಘಟನೆಗಳು ಆಗಾಗ ವರದಿಯಾಗುತ್ತಲೇ ಇದೆ.
ಇದೀಗ ತೆಲಂಗಾಣದ ನಿಜಾಮಬಾದ್ ಜಿಲ್ಲೆಯಲ್ಲಿ ಮತ್ತೊಂದು ಸ್ಫೋಟದ ಘಟನೆ ಸಂಭವಿಸಿದ್ದು, ವ್ಯಕ್ತಿಯೊಬ್ಬರು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ ತೆಗೆದು ಅದನ್ನು ಚಾರ್ಜಿಗೆ ಹಾಕಿದ್ದ ವೇಳೆ ಅದು ಸ್ಪೋಟಗೊಂಡ ಪರಿಣಾಮ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಪ್ರಕಾಶ್ ಎಂಬುವರು ಕಳೆದ ಒಂದು ವರ್ಷದಿಂದ ಈ ಸ್ಕೂಟರ್ ಬಳಸುತ್ತಿದ್ದು, ಬುಧವಾರದಂದು ರಾತ್ರಿ12-30 ರ ಸುಮಾರಿಗೆ ಬ್ಯಾಟರಿ ತೆಗೆದು ಚಾರ್ಜಿಗೆ ಹಾಕಿದ್ದಾರೆ. ಬೆಳಗ್ಗೆ 4 ಗಂಟೆ ವೇಳೆಗೆ ಇದು ಸ್ಪೋಟಗೊಂಡಿದ್ದು ಇದರ ಪರಿಣಾಮ ಪ್ರಕಾಶ್ ಅವರ ತಂದೆ ರಾಮಸ್ವಾಮಿ, ತಾಯಿ ಕಮಲಮ್ಮ, ಮತ್ತು ಮಗ ಕಲ್ಯಾಣ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಬೆಂಕಿ ನಂದಿಸಲು ಹೋದ ಪ್ರಕಾಶ್ ಮತ್ತು ಅವರ ಪತ್ನಿ ಕೃಷ್ಣವೇಣಿ ಅವರಿಗೂ ಗಾಯಗಳಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ರಾಮಸ್ವಾಮಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.