ನವದೆಹಲಿ: ಓಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಿ ನಾಪತ್ತೆಯಾಗಿದ್ದ ಎಂಟು ಭಾರತೀಯರನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಟೆಗ್ ಬುಧವಾರ ರಕ್ಷಿಸಿದೆ. ತೈಲ ಹಡಗಿನಲ್ಲಿ ಒಟ್ಟು 16 ಸಿಬ್ಬಂದಿಗಳಿದ್ದು, ಅದರಲ್ಲಿ 13 ಮಂದಿ ಭಾರತೀಯರು.
ಪ್ರಸ್ತುತ ಪ್ರದೇಶದಲ್ಲಿ ಭಾರತೀಯ ನೌಕಾಪಡೆ ಮತ್ತು ಒಮಾನಿ ಏಜೆನ್ಸಿಗಳ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 15 ರಂದು ಭಾರತೀಯ ನೌಕಾಪಡೆಯು ಒಮಾನಿ ಹಡಗುಗಳು ಮತ್ತು ಸಿಬ್ಬಂದಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಸಮುದ್ರ ಕಣ್ಗಾವಲು ವಿಮಾನ P-8I ಜೊತೆಗೆ INS ಟೆಗ್ ಅನ್ನು ರವಾನಿಸಿತ್ತು.
ಭಾರತೀಯ ಯುದ್ಧನೌಕೆಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಿರ್ದೇಶಿಸುವ ಮೊದಲು ಈ ಪ್ರದೇಶದಲ್ಲಿ ಕಾರ್ಯಾಚರಣೆಯ ಪರಿಸ್ಥಿತಿ ಅವಲೋಕಿಸಿದೆ. ಯುದ್ಧನೌಕೆಯು ಜುಲೈ 16 ರಂದು ಮುಂಜಾನೆ ತೈಲ ಟ್ಯಾಂಕರ್ ಅನ್ನು ಪತ್ತೆಹಚ್ಚಿದೆ. ಸವಾಲಿನ ವಾತಾವರಣದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮುಳುಗಿದ ತೈಲ ಟ್ಯಾಂಕರ್ MV ಪ್ರೆಸ್ಟೀಜ್ ಫಾಲ್ಕನ್‌ಗೆ SAR ನೆರವು ನೀಡಲು ಯುದ್ಧನೌಕೆ INS ಟೆಗ್ ಅನ್ನು ನಿಯೋಜಿಸಿದ್ದು, ಪ್ರೆಸ್ಟೀಜ್ ಫಾಲ್ಕನ್ ಓಮನ್‌ನ ರಾಸ್ ಮದ್ರಕಾದ ಆಗ್ನೇಯಕ್ಕೆ ಸುಮಾರು 25 ನಾಟಿಕಲ್ ಮೈಲಿ ದೂರದಲ್ಲಿ ಮುಳುಗಿದೆ ಎಂದು ಭಾರತೀಯ ನೌಕಾಪಡೆಯು ತಿಳಿಸಿದೆ.
ಹವಾಮಾನ ವೈಪರೀತ್ಯ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ. ಭಾರತೀಯ ನೌಕಾಪಡೆಯ ಪ್ರಕಾರ, ಈ ಪ್ರದೇಶದಲ್ಲಿ ಬಲವಾದ ಗಾಳಿ, ಸಮುದ್ರ ಪ್ರಕ್ಷುಬ್ಧವಾಗಿದೆ. ಕೊಮೊರೊಸ್-ಧ್ವಜದ ತೈಲ ಹಡಗು ಒಮಾನ್‌ನ ಪ್ರಮುಖ ಕೈಗಾರಿಕಾ ಬಂದರು ಡುಕ್ಮ್‌ನಲ್ಲಿ ಮುಳುಗಿತು. ಒಂದು ದಿನದ ನಂತರ, ಮಾರಿಟೈಮ್ ಸೆಕ್ಯುರಿಟಿ ಸೆಂಟರ್(MSC) ಅಪಘಾತವನ್ನು ದೃಢಪಡಿಸಿತು. 13 ಭಾರತೀಯರನ್ನು ಒಳಗೊಂಡಂತೆ 16 ಸದಸ್ಯರ ಸಿಬ್ಬಂದಿ ಇದ್ದರು. IndianNavy ಯ ಮಿಷನ್ ಯುದ್ಧನೌಕೆ INSTeg ಮುಳುಗಿದ ತೈಲ ಟ್ಯಾಂಕರ್ ನಿಂದ 9 (8 ಭಾರತೀಯರು ಮತ್ತು 1 ಶ್ರೀಲಂಕಾ) ಸಿಬ್ಬಂದಿಯನ್ನು ರಕ್ಷಿಸಿದೆ. IndiaNavyಯ ಲಾಂಗ್ ರೇಂಜ್ ಮ್ಯಾರಿಟೈಮ್ ವಿಚಕ್ಷಣ ವಿಮಾನ P8I ಸಹ ಉಳಿದವರಿಗಾಗಿ ಹುಡುಕಾಟದಲ್ಲಿ ಸಹಾಯ ಮಾಡುತ್ತಿದೆ ಎಂದು ಹೇಳಲಾಗಿದೆ.