alex Certify ಭಾರತದಲ್ಲಿ ಪ್ರತಿ ವರ್ಷ ವ್ಯರ್ಥವಾಗ್ತಿದೆ 8 ಕೋಟಿ ಟನ್ ಆಹಾರ; ಪಾಕಿಸ್ತಾನ-ಬಾಂಗ್ಲಾದೇಶದ ಸ್ಥಿತಿ ಹೇಗಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಪ್ರತಿ ವರ್ಷ ವ್ಯರ್ಥವಾಗ್ತಿದೆ 8 ಕೋಟಿ ಟನ್ ಆಹಾರ; ಪಾಕಿಸ್ತಾನ-ಬಾಂಗ್ಲಾದೇಶದ ಸ್ಥಿತಿ ಹೇಗಿದೆ ಗೊತ್ತಾ….?

ಆರೋಗ್ಯಕರ ಆಹಾರವನ್ನು ಮಿತವಾಗಿ ಸೇವಿಸಿದರೆ ದೀರ್ಘಕಾಲ ಬದುಕಬಹುದು. ಆದರೆ ಆಹಾರವನ್ನು ಅತಿಯಾಗಿ ತಿನ್ನುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಹೆಚ್ಚು. ವೈದ್ಯರ ಈ ಅಭಿಪ್ರಾಯದ ಹೊರತಾಗಿಯೂ ಭಾರತದಲ್ಲಿ ಜನರು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಿದ್ದಾರೆ. ಅಷ್ಟೇ ಅಲ್ಲ ಆಹಾರವನ್ನು ವ್ಯರ್ಥ ಮಾಡುತ್ತಾರೆ.

ವಿಶ್ವಸಂಸ್ಥೆಯ ಹೊಸ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 8 ಕೋಟಿ ಟನ್ ಆಹಾರ ಅಂದರೆ ಒಬ್ಬ ವ್ಯಕ್ತಿ 55 ಕೆಜಿಯಂತೆ ವ್ಯರ್ಥ ಮಾಡಲಾಗ್ತಿದೆ. ಪ್ರತಿದಿನ ಹಸಿವಿನಿಂದ ನೂರಾರು ಜನರು ಸಾಯುತ್ತಿರುವ ಸಂದರ್ಭದಲ್ಲಿ ಇಷ್ಟೆಲ್ಲಾ ಪ್ರಮಾಣದ ಆಹಾರವನ್ನು ವ್ಯರ್ಥ ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ಭಾರತ ಮಾತ್ರವಲ್ಲ ಇತರ ರಾಷ್ಟ್ರಗಳಲ್ಲೂ ಇದೇ ಪರಿಸ್ಥಿತಿ ಇದೆ.

ವಿಶ್ವಸಂಸ್ಥೆಯ ವರದಿ ಪ್ರಕಾರ 2022ರಲ್ಲಿ 73 ಕೋಟಿ ಜನರಿಗೆ ಊಟ-ಉಪಹಾರ ಸಿಕ್ಕಿಲ್ಲ. 2023ರಲ್ಲಿ ಈ ಸಂಖ್ಯೆ 78 ಕೋಟಿಗೆ ಏರಿಕೆಯಾಗಿದೆ. 2022ರಲ್ಲಿ ಭಾರತದಲ್ಲಿ ಒಬ್ಬ ವ್ಯಕ್ತಿಗೆ 50 ಕೆಜಿಯಂತೆ ಆಹಾರ ವ್ಯರ್ಥವಾಗಿದೆ. ಈ ಪ್ರಮಾಣ 2023ರಲ್ಲಿ 55 ಕೆಜಿಗೆ ಏರಿಕೆಯಾಗಿದೆ. ಒಂದೆಡೆ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಆಹಾರ ವ್ಯರ್ಥವಾಗುತ್ತಿದೆ.

ಪ್ರಪಂಚದಾದ್ಯಂತ ಹೇಗಿದೆ ಪರಿಸ್ಥಿತಿ?

ಸರಾಸರಿಯಾಗಿ ವಿಶ್ವದ ಪ್ರತಿಯೊಬ್ಬ ವ್ಯಕ್ತಿ ವರ್ಷಕ್ಕೆ 79 ಕೆಜಿ ಆಹಾರವನ್ನು ವ್ಯರ್ಥ ಮಾಡುತ್ತಾನೆ. ಜಗತ್ತಿನಲ್ಲಿ ವ್ಯರ್ಥವಾಗುತ್ತಿರುವ ಆಹಾರದ ಪ್ರಮಾಣವು ಒಟ್ಟು ಉತ್ಪಾದನೆಯ ಶೇ.30 ರಷ್ಟಿದೆ. ಇದರಲ್ಲಿ ಹಸಿದ ವ್ಯಕ್ತಿಯು ದಿನಕ್ಕೆ ಎರಡು ಬಾರಿ ಊಟ ಮಾಡಬಹುದು. ಪ್ರತಿ ವರ್ಷ ರೈತರ ಶ್ರಮದ ಶೇ.30ರಷ್ಟು ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಆಹಾರವನ್ನು ಯಾರು ವ್ಯರ್ಥ ಮಾಡುತ್ತಾರೆ?

ಮನೆಗಳಲ್ಲಿ 61 ಪ್ರತಿಶತದಷ್ಟು, ಶೇ.23ರಷ್ಟು ಆಹಾರ ರೆಸ್ಟೋರೆಂಟ್‌ಗಳಲ್ಲಿ, ಶೇ.13ರಷ್ಟು ಆಹಾರ ಚಿಲ್ಲರೆ ಸರಪಳಿಯಲ್ಲಿ ಅಂದರೆ ಪೂರೈಕೆ, ಸಂಗ್ರಹಣೆ ಅಥವಾ ಅಂಗಡಿಗಳಲ್ಲಿ ವ್ಯರ್ಥವಾಗುತ್ತಿದೆ. ಏಷ್ಯಾದ ದೇಶಗಳಲ್ಲಿ ವಾರ್ಷಿಕ ತಲಾ ಆಹಾರ ವ್ಯರ್ಥದ ಪ್ರಮಾಣ ಹೀಗಿದೆ-

* ಭಾರತ 55 ಕೆ.ಜಿ

* ಪಾಕಿಸ್ತಾನ 130 ಕೆ.ಜಿ

* ಅಫ್ಘಾನಿಸ್ತಾನ 127 ಕೆ.ಜಿ

* ಬಾಂಗ್ಲಾದೇಶ 82 ಕೆ.ಜಿ

* ಭೂತಾನ್ 19 ಕೆ.ಜಿ

ವರದಿಯ ಪ್ರಕಾರ ಜನರು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಖರೀದಿಸುತ್ತಿದ್ದಾರೆ. ಅದರಲ್ಲಿ ಹೆಚ್ಚಿನದನ್ನು ಮುಕ್ತಾಯ ದಿನಾಂಕದ ಕಾರಣ ಎಸೆಯಲಾಗುತ್ತದೆ. ಭಾರತದಲ್ಲಿ ದಿನಕ್ಕೆ ಮೂರು ಬಾರಿ ಊಟ ಸಿಗದ 19 ಕೋಟಿ ಜನರಿದ್ದಾರೆ. 14 ಕೋಟಿ ಜನರು ರಾತ್ರಿ ಹಸಿವಿನಿಂದ ಮಲಗುತ್ತಾರೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 125 ದೇಶಗಳ ಪೈಕಿ ಭಾರತ 111ನೇ ಸ್ಥಾನದಲ್ಲಿದೆ. ಆದರೂ ಆಹಾರ ಪೋಲಾಗುತ್ತಿದೆ.

ಭಾರತದಲ್ಲಿ ಆಹಾರ ವ್ಯರ್ಥವಾಗುವುದನ್ನು ನಿಲ್ಲಿಸಿದರೆ 10 ಪ್ರತಿಶತ ಇಂಗಾಲದ ಹೊರಸೂಸುವಿಕೆ ಮತ್ತು ರೈತರ ಶ್ರಮವನ್ನು ಉಳಿಸಬಹುದು. ವಿಶ್ವಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇ.16.6. ಇದಲ್ಲದೇ ಕಡಿಮೆ ಎತ್ತರದ ಮಕ್ಕಳು ಶೇ.31.7 ಮತ್ತು ಅಧಿಕ ತೂಕದ ಮಕ್ಕಳು ಶೇ.2.8ರಷ್ಟಿದ್ದಾರೆ. ಭಾರತದಲ್ಲಿ 76 ಪ್ರತಿಶತ ಜನರಿಗೆ ಆರೋಗ್ಯಕರ ಆಹಾರ ಸಿಗುತ್ತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...