ಕೇಂದ್ರ ಸರ್ಕಾರದ ನೌಕರರಿಗೆ ಮೋದಿ ಸರ್ಕಾರವು ಸಿಹಿ ಸುದ್ದಿ ನೀಡಲಿದೆ. ಸರ್ಕಾರಿ ಮತ್ತು ನಿವೃತ್ತ ನೌಕರರಿಗೆ ಡಿಎ ಹೆಚ್ಚಳವನ್ನು ಶೀಘ್ರವೇ ಘೋಷಿಸುವ ಸಾಧ್ಯತೆಯಿದೆ. ವರದಿಗಳ ಪ್ರಕಾರ ದಸರಾ ರಜಾದಿನದ ಮೊದಲು ಸರ್ಕಾರವು ವೇತನ ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದೆ.
ಡಿಎ ಹೆಚ್ಚಳವು ಈ ಹಿಂದೆ ಊಹಿಸಲಾದ 3% ಕ್ಕಿಂತ 4% ಹೆಚ್ಚಳವಾಗಿರುತ್ತದೆ ಎಂಬ ನಿರೀಕ್ಷೆಯಿದೆ. ಒಂದು ವೇಳೆ ಡಿಎ ಹೆಚ್ಚಳ ಘೋಷಣೆಯಾದರೆ ಅದು ಜುಲೈ 1, 2023ಕ್ಕೆ ಪೂರ್ವಾನ್ವಯವಾಗುಂತೆ ಜಾರಿಗೆ ಬರಲಿದೆ.
ನವರಾತ್ರಿ ಹಬ್ಬ ಅಕ್ಟೋಬರ್ 15 ರಿಂದ ಪ್ರಾರಂಭವಾಗಲಿದ್ದು ದಸರಾ ಹಬ್ಬದ ಕೊಡುಗೆಯಾಗಿ ಡಿಎ ಹೆಚ್ಚಳ ಮಾಡುವ ನಿರೀಕ್ಷೆಯಿದೆ.
ವರದಿಯ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಯಲ್ಲಿ ಶೇಕಡಾ 4ರಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಈ ಹೊಂದಾಣಿಕೆಯ ನಂತರ ತುಟ್ಟಿ ಭತ್ಯೆಯು ಶೇಕಡಾ 46 ಕ್ಕೆ ತಲುಪುವ ನಿರೀಕ್ಷೆಯಿದೆ.
ಸರ್ಕಾರಿ ನೌಕರರಿಗೆ ಡಿಎ ನೀಡಿದರೆ ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈ ಮಾಸದಲ್ಲಿ ಹೆಚ್ಚಿಸಲಾಗುತ್ತದೆ. ಪ್ರಸ್ತುತ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 42 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಮಾರ್ಚ್ 2023 ರಲ್ಲಿ ಕೊನೆಯ ಬಾರಿ ಶೇಕಡಾ 4 ರಷ್ಟು ಡಿಎ ಹೆಚ್ಚಿಸಲಾಯಿತು.