ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ(ಡಿಎ) ಪರಿಷ್ಕರಣೆಗಾಗಿ ಕಾಯುತ್ತಿದ್ದು, ಸಿಹಿ ಸುದ್ದಿ ನೀಡಲು ಸರ್ಕಾರ ಸಜ್ಜಾಗಿದ್ದು, ಬಾಕಿ ಉಳಿದಿರುವ ಡಿಎ ಅರಿಯರ್ ಬೇಡಿಕೆ ಈಡೇರಿಸಲಿದೆ.
ಡಿಎ ಅಂಕಿಅಂಶವನ್ನು ಶೇಕಡ 4 ರಷ್ಟು ಪರಿಷ್ಕರಿಸುವ ನಿರೀಕ್ಷೆಯಿದೆ, ಕೇಂದ್ರ ಸರ್ಕಾರಿ ನೌಕರರು ಜನವರಿ 2020 ಮತ್ತು ಜೂನ್ 2021 ರ ನಡುವಿನ 18 ತಿಂಗಳ ಅವಧಿಗೆ ಡಿಎ ಬಾಕಿಯ ಬಗ್ಗೆ ಕ್ರಮಕೈಗೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ. ಆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಭರಾಟೆಯ ಮಧ್ಯೆ ಡಿಎ ಹೆಚ್ಚಳ ಸ್ಥಗಿತಗೊಳಿಸಲಾಗಿದ್ದು, ಬಾಕಿ ಪಾವತಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ, ಈ ಸಮಸ್ಯೆಯನ್ನು ಶೀಘ್ರದಲ್ಲೇ ಚರ್ಚಿಸಬಹುದು ಎಂದು ಹೇಳಲಾಗಿದೆ.
ಡಿಎ ಫ್ರೀಜ್ ಅವಧಿಗೆ ಸರ್ಕಾರವು ಪರಿಹಾರವನ್ನು ಪರಿಗಣಿಸಬೇಕು ಎಂದು ಕೌನ್ಸಿಲ್ ಅಭಿಪ್ರಾಯಪಟ್ಟಿದೆ. ಬಾಕಿ ಸಮಸ್ಯೆಯ ಬಗ್ಗೆ ಮಾತುಕತೆಯ ಇತ್ಯರ್ಥಕ್ಕೆ ಯೋಜಿಸಬೇಕು ಎಂದು ಜೆಸಿಎಂ ರಾಷ್ಟ್ರೀಯ ಮಂಡಳಿಯ ಕಾರ್ಯದರ್ಶಿ(ಸಿಬ್ಬಂದಿ ಭಾಗ) ಶಿವಗೋಪಾಲ್ ಮಿಶ್ರಾ ಹೇಳಿದ್ದಾರೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮತ್ತು ಹಣಕಾಸು ಸಚಿವಾಲಯ, ವೆಚ್ಚ ಇಲಾಖೆ ಮತ್ತು ಜೆಸಿಎಂ ನಡುವಿನ ಜಂಟಿ ಸಭೆಯನ್ನು ಶೀಘ್ರದಲ್ಲೇ ನಡೆಸುವ ನಿರೀಕ್ಷೆಯಿದೆ. 18 ತಿಂಗಳ ಡಿಎ ಬಾಕಿ ಮತ್ತು ಅದನ್ನು ಹೇಗೆ ಇತ್ಯರ್ಥಗೊಳಿಸಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಬಹುದು ಎಂದು ಹೇಳಲಾಗಿದೆ.